SHARE

ಬೆಳಗಾವಿ:ಸ್ವಂತ ಜಾಗ ಹೊಂದಿದ ಖಾಸಗಿ ಸಂಸ್ಥೆಗಳಿಗೆ ವಿಸ್ತರಿತ ಶಾಲಾ ಹಾಸ್ಟೇಲ್ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಸಮಾಜ ಕಲ್ಯಾಣ ಇಲಾಖೆಯಿಂದ ಒದಗಿಸುವ ಅವಕಾಶಗಳಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ತಿಳಿಸಿದರು.

ಶನಿವಾರ ಗೋವಾವೆಸ್ ನ ಮೂಲಭಾರತಿ ಶಿಕ್ಷಣ ಸಂಸ್ಥೆಯ ನವೀಕೃತ ಕಟ್ಟಡದ ಎರಡನೇ ಮಹಡಿ ಉದ್ಘಾಟಿಸಿ ಮಾತನಾಡಿ ಸರಕಾರಿ ಮತ್ತು ಸಂಸ್ಥೆಯ ಅನುದಾನ ಬಳಸಿಕೊಂಡು ವಿದ್ಯಾರ್ಥಿಗಳ ಜೀವನ ಬೆಳಕಾಗಿಸುವ ಸಂಘ ಸಂಸ್ಥೆಗಳ ಯತ್ನ ಅಭಿನಂದನಾರ್ಹ ಎಂದರು.
ಇಲಾಖೆಯಿಂದ ಮೂಲಭಾರತಿ ಶಿಕ್ಷಣ ಸಂಸ್ಥೆಗೆ ನೀಡಿದ ಹಣ ಸದ್ಭಳಕೆಯಾಗಿ ಸಂತೃಪ್ತಿ ತಂದಿದೆ. ವಸತಿ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೊಡ್ಡ ಸರಕಾರಿ ಸೇವಾ ಹುದ್ದೆಗಳಿಗೆ ಸೇರಿಕೊಂಡು ಸಮಾಜಕ್ಕೆ ಮರುಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಆರ್. ಕುಲಕರ್ಣಿ ಮಾತನಾಡಿ ಎಸ್ ಸಿ/ ಎಸ್ ಟಿ ಮತ್ತು ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಇಂದು ಉನ್ನತ ಶಿಕ್ಷಣ ಪಡೆಯಲು ಲಕ್ಷಾನುಗಟ್ಟಲೆ ವಿದ್ಯಾರ್ಥಿವೇತನ ಮತ್ತು ಸಹಕಾರ ಇದೆ. ಇಲಾಖೆಯ ಕಚೇರಿ ಕದ ತಟ್ಟಿ ಸವಲತ್ತುಗಳನ್ನು ಜನತೆ ಹಕ್ಕಿನಿಂದ ಪಡೆದುಕೊಳ್ಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷೆ ಯು. ವಿ. ಶ್ರತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೯೫೮ರಲ್ಲೇ ನಗರದಲ್ಲಿ ಸಂಸ್ಥೆ ಹುಟ್ಟಿ ಎಸ್ ಸಿ /ಎಸ್ ಟಿ ಹಾಗೂ ಓಬಿಸಿ ವರ್ಗಗಳ ಉಚಿತ ವಿದ್ಯಾರ್ಜನೆಗೆ ದುಡಿಯುತ್ತ ಮುಂದೆ ಸಾಗಿದೆ. ಜತೆಗೆ ನಮ್ಮ ಅಂಗ ಸಂಸ್ಥೆ ಚಂಪಾಬಾಯಿ ಭೋಗಲೆ ಸರಕಾರಿ ಅನುದಾನಕ್ಕೆ ಒಳಪಟ್ಟು ಸೇವೆ ಮುಂದುವರೆಸಿದೆ. ಕಸ್ತೂರಬಾ ಬಾಲಿಕಾಶ್ರಮವೂ ಸುಮಾರು ನೂರು ಮಕ್ಕಳನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯದಿಂದ ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದರು. ಸಂಸ್ಥೆಯ ನಿರ್ದೇಶಕ ಬಿ. ಎಂ. ಕಾಳೆ ವರದಿ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಿ. ಕೆ. ಖೋಡೆ, ಕಾರ್ಯದರ್ಶಿ ಬಿ. ಟಿ. ನರಗುಂದಗರ, ಖಜಾಂಚಿ ಬಿ. ಬಿ. ಕಾಂಬಳೆ, ಇಂದುಮತಿ ಪಾಟನಕರ, ಆರ್. ದೊಡಮನಿ, ತಿಲಾರೆ, ಗಜಾನನ ಗುಂಜೇರಿ, ಔದ್ಯೋಗಿಕ ಬ್ಯಾಂಕ್ ನಿರ್ದೇಶಕಿ ಭಾಗ್ಯಶ್ರೀ ಹುಗ್ಗಿ, ಲೊಹೀತ ಮೋರಕರ, ಲೊಕೋಪಯೋಗಿ ಇಲಾಖೆ ಅಧಿಕಾರಿ ನಾಯಕ ಮತ್ತಿತರರು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.