SHARE

ಬೆಳಗಾವಿ-ಪದೇ ಪದೇ ಕೆದರುವ ಮನಸ್ಥಿತಿಯ ಕೆಲವರಿಂದ ನಗರದಲ್ಲಿ ವಿವಾದ ಮತ್ತು ಅಶಾಂತಿಗೆ ಕಾರಣವಾಗುತ್ತಿದ್ದು ಗಡಿಕ್ಯಾತೆ ಸಂದೇಶ ಹೊತ್ತ ಟೀ ಶರ್ಟ್ ಮಾರಾಟಗಾರ ಶಹಾಜಿರಾಜ್ ಭೋಸಲೆ(೨೬) ಎಂಬಾತ ಈಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ.

ಮಹಾರಾಷ್ಟ್ರ(ಕೊಲ್ಲಾಪುರ) ಮೂಲದ ಈ ವ್ಯಕ್ತಿ ನಗರದ ಗಣಪತ ಗಲ್ಲಿಯಲ್ಲಿ ‘ನಾನು ಬೆಳಗಾವಿಯವ, ಬೆಳಗಾವಿ ಮಹಾರಾಷ್ಟ್ರದ್ದು’ ಎಂಬರ್ಥದ ತಲೆಬರಹದ ಮರಾಠಿ ಹೇಳಿಕೆಯ ಟಿ ಶರ್ಟ್, ಶಾಲು ಸಾಮಗ್ರಿ ಮಾರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ಮಾಡಿದಾಗ ಪೊಲೀಸರ ಅತಿಥಿಯಾಗಿದ್ದು ಆತನನ್ನು ಖಡೇಬಜಾರ್ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಬೆಳಗಾವಿಯಲ್ಲಿ ಫೆ ೧೬ ರಂದು ಮರಾಠಾ ಕ್ರಾಂತಿ ಮೋರ್ಚಾ ಕಾರ್ಯಕ್ರಮ ಸಹ ನಡೆಯಲಿದ್ದು, ಮೀಸಲಾತಿ ಹೋರಾಟದ ಈ ಮೋರ್ಚಾ ‘ಗಡಿಕ್ಯಾತೆ’ಯಾಗಿ ಬದಲಾಗಬಾರದು ಎಂಬುವುದು ಇಲ್ಲಿನ ಕನ್ನಡಿಗರಲ್ಲಿ ಕಳವಳ ಹುಟ್ಟಿಸಿದೆ.

ಮರಾಠಾ ಕ್ರಾಂತಿ ಮೋರ್ಚಾ ಹೆಸರಲ್ಲಿ ನಗರದಲ್ಲಿ ಎಂಇಎಸ್ ತನ್ನ ‘ಝಾಲಾಚ್ ಫಾಹಿಜೆ’ ಹೋರಾಟ ಮೊಳಗಿಸುವುದೋ ಎಂಬ ಸಂದೇಹ ಈಗ ಜಿಲ್ಲಾಡಳಿತ ಮತ್ತು ಇಲ್ಲಿನ ಜನತೆಗೆ ಮೂಡಸಿದ್ದು, ಅದರ ಮರ್ಮ ಟಿ ಶರ್ಟ್ ಮಾರಾಟದಿಂದ ಬೆಳಕಿಗೆ ಬಂದಿದೆ. ವಶಕ್ಕೆ ಪಡೆಯಲಾದ ವ್ಯಾಪಾರಿ ತಾನು ಸ್ವತಃ ಈ ತಲೆಬರಹದ ಟಿ ಶರ್ಟ್ ತಯಾರಿಸಿ ಮಾರುತ್ತಿದ್ದಾಗಿ ತಿಳಿಸಿದ್ದಾನೆ. ಈತನ ಬೆನ್ನೆಲುಬಾಗಿ ಠಾಣೆಗೆ ಎಂಇಎಸ್ ನಾಯಕರು ತೆರಳಿದ್ದು ಮತ್ತಷ್ಟು ಭಿನ್ನ ಚಟುವಟಿಕೆ ತೆರೆಮರೆಯಲ್ಲಿ ನಡೆದ ಬಗ್ಗೆ ಪುಷ್ಢಿ ನೀಡಿದೆ.