SHARE

ಬೆಳಗಾವಿ:ಸಂವಿಧಾನದ ಮೂಲಕ ಭಾರತದ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ-ಸಾಧನೆ ಬಿಂಬಿಸುವ “ಭಾರತ ಭಾಗ್ಯವಿಧಾತ” ಧ್ವನಿ-ಬೆಳಕು; ದೃಶ್ಯ ವೈಭವಗಳ ರೂಪಕ ಪ್ರದರ್ಶನ ಫೆಬ್ರುವರಿ 16 ರಂದು ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ನಮ್ಮ ದೇಶ ಹಲವಾರು ಮಹನೀಯರ ಕರ್ಮಭೂಮಿ. ಬುದ್ಧ, ಬಸವಣ್ಣ, ಮಹಾತ್ಮಾ ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸತ್ಯ-ಶಾಂತಿ, ಅಹಿಂಸೆ ಹಾಗೂ ಸಮಾನತೆ ಎಂಬ ಮಹಾಮೌಲ್ಯಗಳನ್ನು ತಿಳಿಸಿಕೊಟ್ಟವರು. ಭಾರತದ ತಳಸಮುದಾಯಗಳ ಆತ್ಮಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದ ಮಹಾ ಮಾನವತಾವಾದಿ ಅಂಬೇಡ್ಕರ್. ಇವರ ಜೀವನದ ಕಹಿ ಘಟನೆಗಳು ಸೇರಿದಂತೆ ವಿವಿಧ ಮಜಲುಗಳ ಮೇಲೆ ಧ್ವನಿ-ಬೆಳಕು ಪ್ರದರ್ಶನವು ಬೆಳಕು ಚೆಲ್ಲಲಿದೆ.

ಕಂಸಾಳೆ ಕಲಾವಿದರೂ ಸೇರಿದಂತೆ 80ಕ್ಕೂ ಅಧಿಕ ಕಲಾವಿದರು ಡಾ.ಅಂಬೇಡ್ಕರ್ ಅವರ ಯಶೋಗಾಥೆಯನ್ನು ದೃಶ್ಯ ವೈಭವಗಳ ಮೂಲಕ ಅನಾವರಣಗೊಳಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಕಣ್ತುಂಬಿಸುವ ಬೆಳಕಿನ ಲೋಕ; ಕಿವಿದುಂಬಿಸುವ ಹಿನ್ನೆಲೆ ಸಂಗೀತ ಹಾಗೂ ವೈಚಾರಿಕತೆಯ ಹಿನ್ನೋಟದಲ್ಲಿ ಮೂಡಿಬರಲಿದೆ “ಭಾರತ ಭಾಗ್ಯವಿಧಾತ” ದೃಶ್ಯವೈಭವಗಳ ರೂಪಕ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಭಾರತ ಭಾಗ್ಯವಿಧಾತ ಧ್ವನಿಬೆಳಕು ರೂಪಕವನ್ನು ಬಿ.ಎಂ.ಗಿರಿರಾಜ್ ಅವರು ನಿರ್ದೇಶಿಸಿದ್ದಾರೆ.

ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕ ಫಿರೋಜ್ ಸೇಠ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.