SHARE

ಬೆಳಗಾವಿ:ಪ್ಲಾಸ್ಟರ್ ಆಫ್ ಪ್ಯಾರೀಸ್(pop) ಗಣೇಶ ಮೂರ್ತಿಗಳ ನಿರ್ಮಾಣ ನಿಷೇಧ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದ ಮೂರ್ತಿಕಾರರು, ಗಣೇಶೋತ್ಸವ ಮಂಡಳಿಗಳು ಹಾಗೂ ಹಿಂದೂಪರ ಸಂಘಟನೆಗಳು ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಒತ್ತಾಯಪಡಿಸಿದರು.

ಸ್ವಾತಂತ್ರ್ಯೋತ್ಸವದ ಸಂದರ್ಭ ದೇಶದ ಜನರನ್ನು ಒಗ್ಗೂಡಿಸಲು ಪ್ರಾರಂಭವಾದ ಗಣೇಶೋತ್ಸವಕ್ಕೆ ಶತಕದ ಇತಿಹಾಸವಿದೆ. ಸರಕಾರ ಇಲ್ಲವೇ ಇನ್ನಿತರ ಮೂಲಗಳಿಂದ ಬಿಡಿಗಾಸು ಹಣಕಾಸಿನ ನೆರವು ಪಡೆಯದೇ ಮನೆಮನೆಯಿಂದ ಹಣ ಸಂಗ್ರಹಿಸಿ ಗಣೆಶೋತ್ಸವ ಮಾಡುತ್ತ ಬರಲಾಗುತ್ತಿದೆ. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತದ ನಿರ್ಧಾರದಿಂದ ಈಗ ಪಿಓಪಿ ಮೂರ್ತಿಗಳ ನಿರ್ಮಾಣಕ್ಕೆ ತಡೆಯಾಜ್ಞೆ ಕೊಟ್ಟಿರುವುದು ಯೋಗ್ಯ ನಿರ್ಧಾರವಲ್ಲ. ಆಡಳಿತ ಮರು ಪರಿಶೀಲಿಸಬೇಕೆಂಬ ಒತ್ತಾಯ ಕೇಳಿಬಂತು. ದೇಶಭಕ್ತಿ ಮತ್ತು ದೈವಭಕ್ತಿ ಮೆರೆಯಲು ಬೆಳಗಾವಿ ಸಮಸ್ತ ಜನತೆಗೆ ಗಣೇಶೋತ್ಸವ ಒಂದು ದೊಡ್ಡ ಹಬ್ಬ, ಇದನ್ನು ಜಿಲ್ಲಾಡಳಿತ ಗಮನಿಸಬೇಕು.

ಹಬ್ಬ ಆಚರಣೆಗೆ ರಾಜಕೀಯ ಇಲ್ಲವೇ ಸ್ವಾರ್ಥ ಶಡ್ಯಂತ್ರಗಳು ನಮ್ಮಲ್ಲಿ ಎಂದೂ ನಡೆದಿಲ್ಲ. ಸಮಸ್ತ ಹಿಂದೂ ಜನತೆ ಇತರ ಧರ್ಮ ಬಂಧುಗಳನ್ನು ಒಗ್ಗೂಡಿಸಿಕೊಂಡು ಪಡುವ ಸಂಭ್ರಮದ ಬಗ್ಗೆ ಆಡಳಿತ ಗಮನಿಸಬೇಕು ಎಂದು ಜನತೆಯ ಪರವಾಗಿ ನಾಯಕರಾದ ಶಾಸಕ ಸಂಜಯ ಪಾಟೀಲ, ಸಂಭಾಜಿ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಹಾಗೂ ಶ್ರೀರಾಮ ಸೇನಾ ಅಧ್ಯಕ್ಷ ರಮಾಕಾಂತ್ ಕೊಂಡುಸಕರ ಆಕ್ರೋಶ ವ್ಯಕ್ತಪಡಿಸಿದರು.
ಮಣ್ಣಿನ ಗಣಪತಿಗಳನ್ನು ಮೊದಲೆಲ್ಲ ಮಾಡಲಾಗುತ್ತಿತ್ತು ಈಗಲೂ ಮಾಡಲಾಗುತ್ತದೆ. ಆದರೆ ಬೃಹತ್ ಉತ್ಸವ ಮೂರ್ತಿಗಳನ್ನು ಮಣ್ಣಿನಿಂದ ಮಾಡುವುದು ದುಸ್ಸಾಧ್ಯ ಜತೆಗೆ ಅವು ಉದುರುವ ಸಂಭವವಿರುತ್ತದೆ. ಉತ್ಸವ ಮೂರ್ತಿಗಳನ್ನು ಪಿಓಪಿಯಿಂದಲೇ ಮಾಡಬೇಕಾಗುತ್ತದೆ. ಅಲ್ಲದೇ ಪಿಓಪಿ ಗಣಪತಿಗಳನ್ನು ಯಾವುದೇ ನೀರಿನ ಆವಾಸದಲ್ಲಿ ಬಿಟ್ಟು ಜನತೆ ಪಾರಿಸರಿಕ ಮಾಲಿನ್ಯ ಎಂದೂ ಮಾಡಿಲ್ಲ. ಪಾಲಿಕೆ ನಿಗದಿಪಡಿಸಿದ ಹೊಂಡಗಳಲ್ಲಿ ಮುಳುಗಿಸಿ ತೆರವು ಮಾಡಲಾಗುತ್ತಿದೆ, ಇನ್ನೆಲ್ಲಿ ಮಾಲಿನ್ಯದ ಪ್ರಶ್ನೆ ಹುಟ್ಟುತ್ತದೆ ಎಂಬ ಪ್ರಶ್ನೆ ಮುಂದಿಟ್ಟರು. ನಗರದಲ್ಲಿ ಸುಮಾರು ೩೫೦ ಗಣೆಶೋತ್ಸವ ಮಂಡಳಗಳಿದ್ದು ವಿಶ್ವಾಸಾರ್ಹತೆ, ಶಾಂತತೆ ಹಾಗೂ ಧಾರ್ಮಿಕ ಸಂಹಿಷ್ಣುತೆಗೆ ಭಂಗ ಎಂದೂ ಮಾಡಿಕೊಂಡಿಲ್ಲ.

ಗಣೇಶ ಮಂಟಪ ರಸ್ತೆ ಮೇಲೆ ಬಂದಿದೆ ಹಾಗೆ -ಹೀಗೆ ಎಂಬ ನೆಪದಿಂದ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆ ಹಿಂದೂಗಳನ್ನು ಕೆದಕುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಮಾಡುತ್ತಿದೆ. ಶಹಾಪುರಲ್ಲಿ ಹಿಂದೂಗಳಿಗೆ ಕಿರಿಕ್ ಮಾಡುವ ಪೊಲೀಸ್ ಇಲಾಖೆ ಖಡೇಬಜಾರ್ ನಲ್ಲಿ ಯಾರೆ ಏನೆ ಮಾಡಿದರು ಸುಮ್ಮನಿರುವುದೇಕೆ. ಸುಪ್ರೀಂಕೋರ್ಟ್ ಹಾಗೂ ಇನ್ನಿತರ ಬೋರ್ಡ್, ಟ್ರಿಬ್ಯೂನಲ್, ಕಾನೂನು ಸಂಸ್ಥೆಗಳ ಆದೇಶ ಯಥಾವತ್ತಾಗಿ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪರಿಪಾಲಿಸುವುದಾದರೆ ಬೆಳಗಿನ ‘ಲೌಡ್ ಸ್ಪೀಕರ್’ ಶಬ್ದ ಮೊದಲು ಬಂದ್ ಮಾಡಿ ಇತರ ವಿಷಯಗಳ ಬಗ್ಗೆ ಗಮನಹರಿಸಲಿ ಎಂದು ಮಾಜಿ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶವಾಗಿಲ್ಲ. ಬದಲಾಗಿ ಹಸಿರು ಮಂಡಳಿ (green tribunal) ಆದೇಶವಾಗಿದ್ದು, ಬೆಳಗಾವಿಯ ವಸ್ತುಸ್ಥಿತಿ ಬಗ್ಗೆ ಜಿಲ್ಲಾಡಳಿತ tribunalಗೆ ಮನವರಿಕೆ ವರದಿ ಕೊಡಬೇಕು ಎಂದು ಒತ್ತಾಯಿಸಿದರು. ಹಿಂದೂ ಹೊರತಾದ ಇತರ ಧರ್ಮಗಳಿಗೆ ತೋರಿಸುವ ಆಡಳಿತದ ಔದಾರ್ಯ ಮತ್ತು ನಡವಳಿಕೆ ಈಗ ಗುಟ್ಟಾಗಿ ಉಳಿದಿಲ್ಲ. ನಗರದ ಎಲ್ಲ ಗಣೇಶೋತ್ಸವ ಮಂಡಳಿಗಳು ಮತ್ತು ಜನತೆ ಎಲ್ಲದಕ್ಕೂ ಸಿದ್ದವಾಗಿದ್ದು ಜಿಲ್ಲಾಡಳಿತ ಪಿಓಪಿ ಗಣೇಶ ನಿರ್ಮಾಣ ನಿಷೇಧದ ಆಜ್ಞೆ ಮರು ಪರಿಶೀಲಿಸಬೇಕು ಎಂದರು.

ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಸಂಭಾಜಿ ಪಾಟೀಲ, ಕಿರಣ ಜಾಧವ, ಸರಿತಾ ಪಾಟೀಲ, ಸಂಜಯ ಶಿಂಧೆ, ಅನಿಲ ಬೆನಕೆ ಸೇರಿದಂತೆ ಇನ್ನಿತರ ಎಲ್ಲ ಮುಖಂಡರು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅನುಮತಿ ಪಡೆದ ಮೇಯರ್: ನೂತನವಾಗಿ ಆಯ್ಕೆಯಾದ ಬೆಳಗಾವಿ ಮೇಯರ್ ಸಂಜೋತಾ ಬಾಂದೇಕರ ಅವರೇ ಸ್ವತಃ ಈ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅನುಮತಿ ಪಡೆದದ್ದು ಗಮನ ಸೆಳೆಯಿತು.

ಕೋಟ್… ದೇಶದಲ್ಲಿ ಯಾವ ರಾಜಕಾರಣಿ ಇಲ್ಲವೇ ಅಧಿಕಾರಿ ಹಿಂದೂ ಸಂಸ್ಕ್ರತಿ ಸಂಪ್ರದಾಯ ಕಡೆಗಣಿಸುವ ಇಲ್ಲವೇ ನೊಟೀಸ್ ಕೊಟ್ಟು ಸಲಕರಣೆಗಳ ಸೀಸ್ ಮಾಡುವ ಧೈರ್ಯ ಪ್ರದರ್ಶಿಸಿದ ಉದಾಹರಣೆ ಇಲ್ಲ. ಅದು ದುಸ್ಸಾಧ್ಯವೇ ಸರಿ. ಪಿಓಪಿ ಗಣಪತಿ ನಿರ್ಮಾಣ ನಿಷೇಧ ಆದೇಶ ಹಿಂಪಡೆಯಬೇಕು. ಆಡಳಿತ ಮುಂದೆ ನಿಂತು ಗಣೇಶೋತ್ಸವ ಆಚರಿಸಬೇಕು. *ಅಭಯ ಪಾಟೀಲ, ಮಾಜಿ ಶಾಸಕ.