SHARE

ಬೆಳಗಾವಿ: ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಹಿಂದ ವರ್ಗಗಳನ್ನು ಓಲೈಸುವ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಬುಧವಾರ ಬಜೆಟ್ ಮಂಡಿಸಿದ್ದರೂ ಜಿಲ್ಲೆಯಲ್ಲಿ ಅಂಥ ನಿರೀಕ್ಷಿತ ಬೆಂಬಲ ಅವರಿಗೆ ಸಿಕ್ಕಿಲ್ಲ.ರೈತರ ಸಾಲ ಮನ್ನಾ ಆಗುವ ನಿರೀಕ್ಷೆ ಹೊತ್ತಿದ್ದ ರೈತರು ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಇಂದು ಕುದಿದು ಹೋಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲು ಸೇರಿದ್ದ ಕೇಂದ್ರ ಮಾಜಿ ಸಂಪುಟ ಸಚಿವ ಬಾಬಾಗೌಡ ಪಾಟೀಲ ನೇತೃತ್ವದ ರೈತರು ಬದಲಾಗಿ ಸಿದ್ದರಾಮಯ್ಯ ಅವರನ್ನು ಖುರ್ಚಿಯಿಂದ ಇಳಿಸುವ ಚಳುವಳಿ ಇಂದಿನಿಂದಲೇ ಪ್ರಾರಂಭಿಸುವುದಾಗಿ ಘೋಷಿಸಿದ್ದು ಕಾಂಗ್ರೆಸ್ ವಿರುದ್ಧ ಪ್ರತಿ ಹಳ್ಳಿಗಳಲ್ಲಿ ಪ್ರಚಾರ ಅಭಿಯಾನ ಪ್ರಾರಂಭಿಸುವ ನಿರ್ಧಾರ ಪ್ರಕಟಿಸಿದರು.

ಭಂಡ ಬಜೆಟ್, ರೈತರ ಅಸಹನೆ:

ಉತ್ತರ ಕರ್ನಾಟಕದ ಆಡಳಿತಾತ್ಮಕ ಮುಖ್ಯಸ್ಥರ ಕಚೇರಿ ಹೆಗ್ಗಳಿಕೆಯ ಪ್ರಾದೇಶಿಕ ಆಯುಕ್ತರ ಕಚೇರಿ ಹುಲ್ಲುಹಾಸಿನ ಮೇಲೆ ಬಾಬಾಗೌಡರ ನೇತೃತ್ವದಲ್ಲಿ ರೈತರು ಸಭೆ ನಡೆಸಿ ಸರಕಾರ ಮತ್ತು ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಲ್ಲು ಮಸೆದಿದ್ದಾರೆ. ಬರದಿಂದ ಕಂಗೆಟ್ಟು ನೀರಿಲ್ಲದೇ ಜನ ಜಾನುವಾರು ಹಲಬುತ್ತಿರುವಾಗ ಸಾಲ ಮನ್ನಾ ಮಾಡಿದ್ದರೆ ಬಹಳ ಸಮಯೋಚಿತ ನಿರ್ಧಾರವಾಗುತ್ತಿತ್ತು. ಆದರೆ ಸಿದ್ಧರಾಮಯ್ಯ ಭಂಡತನ ಮೆರೆದಿದ್ದಾರೆ ಎಂದು ಹಿರಿಯ ರಾಜಕಾರಣಿ, ರೈತ ಸಂಘಟಕ ಬಾಬಾಗೌಡರು ನೇರ ವಾಗ್ದಾಳಿ ನಡೆಸಿ ಜಿಲ್ಲೆಯಿಂದ ರೈತರ ಆಕ್ರೋಶ ಸಂದೇಶ ಸರಕಾರಕ್ಕೆ ಕಳಿಸಿದರು.

ಹೋರಾಟ ಲೆಕ್ಕಿಸದ ಸಿಎಂ:

ರಾಜ್ಯಾದ್ಯಂತ ಕೃಷಿಕರ ಸಾಲ ಮನ್ನಾ ಮಾಡಲು ಜನತೆ ಹಾಗೂ ವಿರೋಧ ಪಕ್ಷಗಳ ಹೋರಾಟ ನಡೆದಿತ್ತಾದರೂ ಅದನ್ನು ಲೆಕ್ಕಿಸದೇ ಸರಕಾರ ಇಂದು ಶೇ. 3ರ ಬಡ್ಡಿದರದಲ್ಲಿ 10 ಲಕ್ಷ ಕೋಟಿ ಕೃಷಿ ಸಾಲ ಕೊಡಲು ನಿರ್ಧರಿಸಿದ್ದು, 25 ಲಕ್ಷ ರೈತರಿಗೆ 13,500 ಕೋಟಿ ಸಾಲ ನೀಡುವ ಗುರಿ ಹೊಂದಿ ಸರಕಾರ ನಗೆ ಪಾಟಲಿಗೀಡಾಗಿದೆ. ಇನ್ನೂ ಮುಂದುವರೆದು ಶೂನ್ಯ ಬಡ್ಡಿದರದಲ್ಲಿ ರೈತರಿಗೆ 3 ಲಕ್ಷದವರೆಗೆ ಸಾಲ ನೀಡುವ ರಕ್ಷಣಾತ್ಮಕ ಹೆಜ್ಜೆ ಇಡಲು ಬಜೆಟ್ ಭಾಷಣ ಪ್ರಯತ್ನ ನಡೆಸಿರುವುದು ವಿಶೇಷ.

ಕೆರೆಗಳಿಗೆ ನೀರು:

ರಾಯಭಾಗ ತಾಲೂಕಿನ 10 ಗ್ರಾಮಗಳ 17 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವುದು,  ಕುಡಚಿ ಕ್ಷೇತ್ರದ10 ಗ್ರಾಮಗಳ 19 ಕೆರೆಗಳಿಗೆ ಕೃಷ್ಣೆಯಿಂದ ನೀರು ತುಂಬಿಸುವ ಯೋಜನೆ ಬಜೆಟ್ ನಲ್ಲಿ ಪ್ರಸ್ತಾಪವಾಗಿದೆ.

ಮೂರು ತಾಲೂಕುಗಳು:

ಇನ್ಮುಂದೆ ಬೆಳಗಾವಿ 14 ತಾಲೂಕುಗಳ ರಾಜ. 11 ನೇ ತಾಲೂಕಾಗಿ ರಾಣಿ ಚೆನ್ನಮ್ಮ ಕಿತ್ತೂರು ಘೋಷಣೆಯಾಗಿ ಇನ್ನೂ ತನ್ನ ತಾಲೂಕಾ ಸ್ಥಾನಮಾನ ರೂಪಿಸಿಕೊಳ್ಳಲು ಹೆಣಗಾಡುತ್ತಿರುವ ಮಧ್ಯೆ ಮತ್ತೆ ಮೂಡಲಗಿ, ಕಾಗವಾಡ ಮತ್ತು ನಿಪ್ಪಾನಿಯನ್ನು ಹೊಸ ಮೂರು ತಾಲೂಕುಗಳಾಗಿ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನತೆಯಲ್ಲಿ ಹೆಚ್ಚಿನ ಆಕರ್ಷಣೆ ಉಂಟಾಗಿಲ್ಲ. ಆಡಳಿತ ಪಕ್ಷದಲ್ಲಿ ಸಂಭ್ರಮ, ವಿರೋಧ ಪಕ್ಷ ಮತ್ತು ಜನತೆಯಲ್ಲಿ ಅಸಹನೆ ವ್ಯಕ್ತವಾಗಿದೆ.
ಕೋಟ್…

ಬಡಜನತೆಗೆ 5 ರೂ. ಉಪಹಾರ, 10 ರೂ. ಊಟ ‘ನಮ್ಮ ಕ್ಯಾಟೀನ್’ ಯೋಜನೆ  ಜನಮನ ಸೆಳೆದಿದೆ. ರಾಜಧಾನಿ ಹೊರಗೆ ಎಲ್ಲ ಕಡೆ ಈ ಕ್ಯಾಂಟೀನ್ ವಿಸ್ತರಿಸಬೇಕಿತ್ತು.*ಲಕ್ಕನ್ನ ಸವಸುದ್ದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ಮಿಕ ಘಟಕ, ಬೆಳಗಾವಿ.*

6ಕೋಟಿ ಜನರ ಸಮಸ್ಯೆಗೆ ಸ್ಪಂದಿಸುವ ಬಜೆಟ್ ಸರಕಾರ ಮಂಡಿಸಿದೆ. ಹೊಸ ತಾಲೂಕುಗಳ ರಚನೆಯ ಮೂಲಕ ಪ್ರಾದೇಶಿಕ ಅಸಮಾನತೆ ದೂರ ಮಾಡಿದೆ, ಬಡ ಜನರ ಆಹಾರ ಹಕ್ಕನ್ನು ಕಡಿಮೆ ದರದಲ್ಲಿ ಪೂರೈಸುವ ‘ನಮ್ಮ ಕ್ಯಾಂಟೀನ್’ ಸೂಪರ್ ಹೆಜ್ಜೆ.* ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ.

*ರೈತ ಕಡೆಗಣನೆ ಬಜೆಟ್:*

ರೈತ ಸಮುದಾಯದ ಬೇಡಿಕೆ ಹಿತಾಸಕ್ತಿಗಳನ್ನು ತುಂಬಿಕೊಡಲು ರಾಜ್ಯ ಬಜೆಟ್ ವಿಫಲವಾಗಿದೆ. ಕಳೆದ ಮೂರು ವರ್ಷದಿಂದ ಜನತೆ ವಿಶೇಷವಾಗಿ ರೈತರು ಬರದಿಂದ ಸತತ ಕಂಗೆಟ್ಟು ದಿವಾಳಿ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಸರಕಾರದಿಂದ ತಮ್ಮ ಎಲ್ಲ ಬಗೆಯ ಸಾಲಮನ್ನಾ ಆಗುವ ನಿರೀಕ್ಷೆ ರೈತರು ಹೊತ್ತಿದ್ದರು. ಆದರೆ ಬಜೆಟ್ ಕಥೆ ಏನಾಗಿದೆ!? ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತ ಬರೀ ಕೆಲ ಸುಮುದಾಯ ಓಲೈಸುವ ತಂತ್ರ  ಮಾಡಲಾಗಿದೆ.
* *ಮಹಾಂತೇಷ ಕವಟಗಿಮಠ, ಎಂಎಲ್ ಸಿ, ಬಿಜೆಪಿ, ಬೆಳಗಾವಿ.*

*ಇತರ ಉಡುಗೊರೆಗಳು:*

** ಸುವರ್ಣಸೌಧದ ಬಳಿ ಪೊಲೀಸರಿಗೆ ವಸತಿ ಸಮುಚ್ಛಯ

**ವೀರ ಸಂಗೊಳ್ಳಿ ರಾಯಣ್ಣನ ಊರಲ್ಲಿ ಸೈನಿಕ ಶಾಲೆ ಸ್ಥಾಪನೆ.

**ಕೇಂದ್ರದ ಸಹಯೋಗದಲ್ಲಿ ಬೆಳಗಾವಿಯಲ್ಲಿ ಸೂಪರ್ ಸ್ಪೆಶಾಲಟಿ ಆಸ್ಪತ್ರೆ ಚಾಲನೆಯ ಇಂಗಿತ.

**ಮಲಪ್ರಭಾ ನದಿಯಿಂದ ಕಿತ್ತೂರು ಕ್ಷೇತ್ರದ ಗದ್ದಿನಕೆರೆಗೆ ನೀರು.

**ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಔಷಧ ತಯಾರಿಕೆಗೆ 5 ಕೋಟಿ ಕಾಯ್ದಿರಿಸಲಾಗಿದ್ದು ಇತರ ಗಮನ ಸೆಳೆಯುವ ಅಂಶಗಳು.