SHARE

ಬೆಳಗಾವಿ: ಹಾಲಿನ ಬ್ಯಾಗಗಳ ಮೇಲೆ ಮ್ಯಾನುಫ್ಯಾಕ್ಚರ್ಡ್ ಹಾಗೂ ಎಕ್ಸ್ಪೈರಿ  ದಿನಾಂಕ ಮುದ್ರಿಸದ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ (ಕೆಎಂಎಪ್) ಜಿಲ್ಲಾಡಳಿತ ೫೦ ಸಾವಿರ ದಂಡ ವಿಧಿಸಲು ಮುಂದಾಗಿದೆ.ಜಿಲ್ಲೆಯಲ್ಲಿ ವಿಷಯುಕ್ತ ಹಾಲು ಉತ್ಪಾದನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರಕಾರಿ ಸ್ವಾಮ್ಯದ ಕೆಎಂಎಫ್ ನಿಂದ ತಯಾರಿಸಲಾಗುತ್ತಿದ್ದ ಹಾಲಿನ ಪಾಕೆಟ್ ಗಳ ಮೇಲೆಯೇ ಉತ್ಪಾದನೆ ಹಾಗೂ ಉಪಯೋಗಿಸುವ ಕಾಲಾವಧಿಯ ಕುರಿತು ದಿನಾಂಕ ಮುದ್ರಣಗೊಂಡಿರಲಿಲ್ಲ.  ಆತಂಕ ಗೊಂಡ ಜನತೆ ನಂದಿನಿ‌ ಹಾಲು ನಕಲಿಯೋ ಅಸಲಿಯೋ ಎಂಬ ಗೊಂದಲಕ್ಕಿಡಾಗಿದ್ದರು. ಮಾಹಿತಿ ಪಡೆದು ಎಚ್ಚೆತ್ತ ಜಿಲ್ಲಾಡಳಿತ ಫೆಬ್ರವರಿ ೨೬ರಂದು ತುರ್ತು ಸಭೆ ನಡೆಸಿ ಕೆಎಂಎಪ್ ನಿಂದ ಉತ್ಪಾದನೆ ಮಾಡುವ ಹಾಲಿನ ಗುಣಮಟ್ಟ ಪರೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸಮೀಕ್ಷಣಾಧಿಕಾರಿಗೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಹಾಲಿನ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ ಆದರೆ ಹಾಲಿನ ಪಾಕೆಟ್ ಮೇಲೆ ಉತ್ಪಾದನೆ ಹಾಗೂ ಉಪಯೋಗಿಸುವ ಕಾಲಾವಧಿಯ ದಿನಾಂಕ ಮುದ್ರಿಸದ ಹಿನ್ನೆಲೆಯಲ್ಲಿ ಆತಂಕಕ್ಕಿಡಾಗಿದ್ದಾರೆ ಎಂಬ ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಎಂಎಫ್ ಗೆ ೫೦ ಸಾವಿರ ದಂಡ ಹಾಕಲು ಕ್ರಮ ಕೈಗೊಂಡಿದೆ. ಅಲ್ಲದೆ ಇಂತಹ ಪ್ರಕರಣ ಮರುಕಳಿಸಿದರೆ ಮಂಡಳಿ ವಿರುದ್ಧ ಕಠಿನ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ತಿಳಿಸಿದ್ದಾರೆ.