SHARE

ಬೆಳಗಾವಿ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಕಾವೇರಿಯನ್ನು ಸತತ 56 ಗಂಟೆಗಳ ಕಾರ್ಯಾಚರಣೆ ನಂತರ ತಡರಾತ್ರಿ 1 ರ ಸುಮಾರಿಗೆ ಹೊರತೆಗೆದರೂ ಆಕೆ ಬದುಕುಳಿಯಲಿಲ್ಲ.

ತಡರಾತ್ರಿ ಪೋಷಕರು ಹಾಗೂ ಗ್ರಾಮಸ್ಞತರ ದುಖಃ ಮೇರೆ ಮೀರಿತ್ತು. ಅಧಿಕಾರಿಗಳು ಸಿಬ್ಬಂಧಿ ಸಹ ತೀವ್ರ ನಿರಾಶೆ ಅನುಭವಿಸಿದರು. ಕಾವೇರಿಯನ್ನು ಜಿಲ್ಲಾಡಳಿತ ಸೋಮವಾರ ಸಂಜೆ ತಲುಪಿದ್ದರೂ ಆಕೆ ಕೈಗೆ ಸಿಕ್ಕು ಆರೋಗ್ಯ ತಪಾಸಿಸಲು ರಾತ್ರಿ 1 ರ ಸಮಯ ದಾಟಿತ್ತು.

ಕೊನೆಯ ಕ್ಷಣದ ಕಾರ್ಯಾಚರಣೆ ಎಂದು ಹೇಳಲಾಗುತ್ತ ಆವರಿಸಿದ ಕತ್ತಲ ಮಧ್ಯೆ ಆಕೆಯನ್ನು ಹೊರತರಲು ಬಹಳ ಸೂಕ್ಷ್ಮ ಕಾರ್ಯಾಚರಣೆ ಇಳಿರಾತ್ರಿವರೆಗೆ ನಡೆಸಲಾಯಿತು.ಕಾವೇರಿ ತನ್ನ ಜೀವಂತಿಕೆಯ ಆಶಯ ತೆರೆದ ಜಗತ್ತಿಗೆ ಇಟ್ಟು ಮಣ್ಣಿನಾಳದ ಕೊಳವೆಯಲ್ಲಿ ಹುದುಗಿದ್ದ ಕಾವೇರಿಯ ರಕ್ಷಣಾ ಕಾರ್ಯ ಸಫಲವಾದರೂ ಆಕೆ ಮಾತ್ರ ಉಳಿಯಲಿಲ್ಲ.

ಅಥಣಿ ತಾಲೂಕಿನ ಝಂಜರವಾಡದ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದು 48 ಘಂಟೆ ಕಳೆದ ಬಳಿಕ ಆಶಾಭಾವನೆಯಿಂದ ರಕ್ಷಣಾ ಕಾರ್ಯ ಮುಂದುವರೆಸಿದ್ದ ಜಿಲ್ಲಾಡಳಿತಕ್ಕೆ ಸೋಮವಾರ ಸಂಜೆ 4:30ರ ಸುಮಾರಿಗೆ ಕಾಲುಗಳು ಗೋಚರಿಸಿದವು.

ಸೋಮವಾರ ಸತತ ಪರಿಶ್ರಮದಿಂದ ಮಣ್ಣು ಕುಸಿಯದಂತೆ ಬೋರವೆಲ್ ಪಾರ್ಶ್ವ ಬದಿ 25 ಅಡಿ ಆಳ ಕೊರೆಯುವಲ್ಲಿ ತಂಡ ಯಶಸ್ವಿಯಾಗಿತ್ತು.
ಕೇಸಿಂಗ್ ಪೈಫ್ ಇಲ್ಲದ ಬೋರ್ ಆಳದ ಮಧ್ಯೆ ಸಿಲುಕಿರುವ ಬಾಲಕಿ ರಕ್ಷಣೆಗೆ ಪಣ ತೊಟ್ಟ ಆಡಳಿತದ ಮುಂದೆ ಬೋರ್ ಕಳಚಿ ಹೋಗದ ಜಾಗೃತಿ ಮುಖ್ಯವಾಗಿತ್ತು. ಬಾಲಕಿ ಕಳಚಿ ಹೋಗದಂತೆ ಆಕೆಯ ಕೈಗೆ ಕಾಲರ್ ಬೆಲ್ಟ್ ಅಳವಡಿಸುವಲ್ಲಿ ಸಹ ಸೋಮವಾರ ಬೆಳಿಗ್ಗೆಯೇ NDRF ತಂಡ ಯಶಸ್ವಿಯಾಗಿತ್ತು.ಮಗು ಕಾವೇರಿ ಪಾದ ಗೋಚರಿಸುತ್ತಿದ್ದಂತೆ ನಿರಾಳತೆ ಕಂಡ ತಂಡಕ್ಕೆ ರಾತ್ರಿಯುದ್ದಕ್ಕೂ ಬಹಳ ಸೂಕ್ಷ್ಮವಾಗಿ ಅವಳನ್ನು ಬೇರ್ಪಡಿಸಿ ಹೊರತರುವ ಜವಾಬ್ದಾರಿ ಬಂದೊದಗಿತು. ಕಂದಾಯ, ಪೊಲೀಸ್,ಅಗ್ನಿಶಾಮಕ ಸೇರಿದಂತೆ ಸುಮಾರು 500 ಜನ ಸರಕಾರದ ಹಲವು ಇಲಾಖೆಗಳ ಸಿಬ್ಬಂಧಿ ಹಾಗೂ ಸ್ಥಳಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಸತತ ಮೂರು ದಿನ ಕಸರತ್ತು ನಡೆಸಿದರು.

ಈ ಕಾರ್ಯ ಸಂಪನ್ನಗೊಂಡು ಕಾವೇರಿ ಕೈಗೆ ಬಂದ ನಂತರವೇ ಕಾವೇರಿಯ ಆರೋಗ್ಯ ಸ್ಥಿತಿಗತಿ ತಿಳಿಯಲಿದ್ದ ಬಗ್ಗೆ ನೆರೆದಿದ್ದ ಜನರಲ್ಲಿ ಆತಂಕ ಮನೆ ಮಾಡಿತ್ತು. ಮೂರುದಿನ ಮಣ್ಣಿನ ಒಡಲಾಳದಲ್ಲಿ ಆಹಾರ, ನೀರು, ಗಾಳಿಯಿಲ್ಲದ ಪರಿಸ್ಥಿತಿ ನೆನೆಸಿಕೊಳ್ಳಿ, ಎಂಥ ಯಾತನೆ ಅವಳು ಅನುಭವಿಸಿದಳು.

ಹಿರಿಯ ವೈದ್ಯಾಧಿಕಾರಿಗಳ ತಂಡ ಅತ್ಯಾಧುನಿಕ ಅಂಬ್ಯಲೆನ್ಸ್ ನೊಂದಿಗೆ ಹಾಜರಿದ್ದು ಕಾವೇರಿಯನ್ನು ಕೈಗೆ ಪಡೆಯುವ ನಿರೀಕ್ಷೆಯಲ್ಲಿ ತಹತಹಿಸಿತ್ತು. ಎಷ್ಟೇ ಗಂಟೆ ಭೂ ಆಳದಲ್ಲಿ ಕಾವೇರಿ ಇದ್ದರೂ ಜೀವಂತವಿದ್ದಾಳೆ ಎಂಬ ಅಮಿತ ಆಶಾ ಭಾವನೆಯಿಂದಲೇ ಕಾರ್ಯಾಚರಣೆ ಮೂರು ದಿನ ನಡೆಯಿತು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಾವೇರಿಗಾಗಿ ಮರುಗಿ ಕಾರ್ಯಾಚರಣೆಯ ಪೂರ್ಣ ಪ್ರಸಾರ ಮಾಡಿದವು. ಕಾವೇರಿ ಮಡಿಲಿಗೆ ಬರುತ್ತಾಳೆಂಬ ಪೋಷಕ ದಂಪತಿ ಸವಿತಾ-ಅಜಯ್,ಆಕೆಯನ್ನು ಹೋರಾಟದಲ್ಲಿ ಗೆದ್ದು ತರುತ್ತೇವೆಂದು ಟೊಂಕ ಕಟ್ಟಿದ ಆಡಳಿತ; ಪವಾಡಸದೃಶ್ಯ ಕಾವೇರಿ ಕಂಗಳ ದರ್ಶನಕ್ಕೆ ಇಡೀ ಜಗತ್ತು ಹೊತ್ತ ಆಕಾಂಕ್ಷೆ ಹುಸಿಯಾಯಿತು.