SHARE

ಬೆಳಗಾವಿ: ಪ್ರಪ್ರಥಮ ಬಾರಿಗೆ ಸರಕಾರದ ವತಿಯಿಂದ ಶಿವಶರಣೆ ಮಹಾಸ್ವಾದಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಉತ್ಸವ ನಡೆಸಲುದ್ದೇಶಿಸಿರುವುದು ಸಂತಸದ ಸುದ್ದಿ ಎಂದು ರೆಡ್ಡಿ ಸಮಾಜದ ಅಧ್ಯಕ್ಷ ಭೀಮರೆಡ್ಡಿ ಮಳಲಿ ಸಂತಸ ವ್ಯಕ್ತಪಡಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿ ಆಂದ್ರಪ್ರದೇಶದ ವೆಲ್ಲಟೂರ ಜಿಲ್ಲೆಯ ರಾಮುಪುರದಲ್ಲಿ ರೆಡ್ಡಿ ಅರಸೊತ್ತಿಗೆಯ ನಾಗರೆಡ್ಡಿ ಹಾಗೂ ಗೌರಮ್ಮ ದಂಪತಿಗಳಿಗೆ ಹುಟ್ಟಿದ ಹೇಮರೆಡ್ಡಿ ಮಲ್ಲಮ್ಮ ಸ್ವತಃ ಶಿವ ಮಲ್ಲಿಕಾರ್ಜುನನ್ನು ಭಕ್ತಿಯಿಂದ ಒಲಿಸಿಕೊಂಡು ಜೀವಲೋಕಕ್ಕೆ ತಾಯಿಯಾಗಿದ್ದಳು ಎಂದರು.

ಅಮಿತೋತ್ಸಾಹದಿಂದ ಮಲ್ಲಮ್ಮ ಜಯಂತಿ ಉತ್ಸವವನ್ನು ಮೇ. 10 ರಂದು ಸಂಜೆ 4 ಕ್ಕೆ ನಡೆಸಲಾಗುವುದು. ನಾಳೆ ಜಿಲ್ಲಾಡಳಿತದಿಂದ ಹಾಗೂ ತಾಲೂಕು ಆಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಉತ್ಸವ ಎಲ್ಲೆಡೆ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ ಚನ್ನಮ್ಮ ವೃತ್ತ, ಕೃಷ್ಣದೇವರಾಯ ಸರ್ಕಲ್ ಮೂಲಕ ಮೆರವಣಿಗೆ ಸಾಗಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಭೆಯಾಗಿ ಸೇರಲಿದೆ ಎಂದರು. ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಹೇಮರೆಡ್ಡಿ ಮಲ್ಲಮ್ಮ ಉತ್ಸವ ಸರಕಾರದಿಂದ ನಡೆಸುವಂತೆ ಸಮಾಜ ಬಹುಹಿಂದೆ ಆಗ್ರಹಿಸಿತ್ತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜಿಲ್ಲಾಧಿಕಾರಿ ಎನ್. ಜಯರಾಮ, ಸಂಸದ ಸುರೇಶ ಅಂಗಡಿ, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಮೇಯರ್ ಸಂಜೋತಾ ಬಾಂದೇಕರ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಆರ್. ವಿ. ಮಳ್ಳೂರ, ಬಿ. ಬಾವಲಟ್ಟಿ, ಬಿ. ಎನ್. ನಾಡಗೌಡ, ನಾರಾಯಣ ಕೆಂಚರೆಡ್ಡಿ, ಪತ್ರಕರ್ತ ಮಂಜುನಾಥ ಪಾಟೀಲ ಹಾಗೂ ಅರಕೇರಿ ಉಪಸ್ಥಿತರಿದ್ದರು.