SHARE

ಬೆಳಗಾವಿ:ಮೂರು ದಶಕಗಳಿಂದ ಜಿಲ್ಲೆಯ ಮೂಲ ಬಿಜೆಪಿ ಕಾರ್ಯಕರ್ತನಾಗಿ ಪಕ್ಷ ಬೆಳೆಸಿದ  ನನಗೆ ಅರಭಾವಿ ಕ್ಷೇತ್ರ ಬಿಡಿಸಿಕೊಟ್ಟು ವಿಧಾನಸಭಾ ಚುನಾವಣಾ ಟಿಕೇಟ್ ನೀಡುವಂತೆ ಪಕ್ಷದ ಮಾಜಿ ಜಿಲ್ಲಾದ್ಯಕ್ಷ ಹಾಗೂ ಜಿಪಂ. ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ.ಮಾಧ್ಯಮಗಳಿಗೆ ಮನದಾಳ ಬಿಚ್ಚಿಟ್ಟ ಅವರು ಬಿಜೆಪಿ ಅಸ್ತಿತ್ವದಲ್ಲೇ ಇಲ್ಲದಾಗ ಅಂದರೆ ಕಳೆದ 30 ವರ್ಷಗಳ ಹಿಂದೆ ಬಿಜೆಪಿಗೆ ಹೆಗಲು ಕೊಟ್ಟವನು ನಾನು. 1994 ರಲ್ಲೇ ಅರಭಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆವಾಗ ಚುನಾವಣೆ ಮೂಲಕ ಪಕ್ಷ ಸಂಘಟಿಸುವ ಕಾಲವಿತ್ತು. ಪಕ್ಷಕ್ಕೆ ಬಂದ ಹೊಸಬರಿಗೆ ಅಂದು ನಾನು ನನ್ನ ಕ್ಷೇತ್ರ ಬಿಟ್ಟುಕೊಟ್ಟು ತ್ಯಾಗ ಮಾಡಿದ್ದೇನೆ. ರೈತ ಸಂಘದಿಂದ ಬಂದ ಬಾಬಾಗೌಡ ಪಾಟೀಲ, ಹೋರಾಟಗಾರ ಲಾತೂರ, ಕುರುಬ ಸಮಾಜದ ನಾಯಕ ವಿವೇಕರಾವ ಪಾಟೀಲ ಹಾಗೂ operation Kamal ದ ಮೂಲಕ ಪಕ್ಷಕ್ಕೆ ಬಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟು ಅವರು ಹೆಚ್ಚಿನ ಮತದಿಂದ ಗೆಲ್ಲಲು ದುಡಿದಿದ್ದೇನೆ.

ಬಿಜೆಪಿ ಮಹತ್ವಾಕಾಂಕ್ಷೆಯ ಮಿಶನ್ 150 ಆಗಬೇಕಾದರೆ ಗಟ್ಟಿತನದ ಅಭ್ಯರ್ಥಿಗಳನ್ನು ಆಯಾ ಕ್ಷೇತ್ರಗಳಲ್ಲಿ ನಿಲ್ಲಿಸಬೇಕು. 1991 ರಿಂದ 2014 ರವರೆಗೆ ಒಟ್ಟು 7 ವಿಧಾನಸಭಾ ಚುನಾವಣೆಗಳಿಗೆ ಪಕ್ಷಕ್ಕಾಗಿ ಹೆಗಲು ಕೊಟ್ಟಿದ್ದೇನೆ.ಈಗ ನನಗೆ ನನ್ನ ಮತಕ್ಷೇತ್ರ ಬಿಡಿಸಿ ಕೊಡಬೇಕು. ಹಿರಿಯ ರಾಜಕಾರಣಿ ಬಾಲಚಂದ್ರ ಜಾರಕಿಹೊಳಿ ಬೇರೆ ಯಾವ ಕ್ಷೇತ್ರಕ್ಕೆ ಸ್ಪರ್ಧಿಸಿದರೂ ಗೆದ್ದು ಬರುತ್ತಾರೆ ಎಂಬ ನಂಬಿಕೆ ಇದೆ. ಕ್ಷೇತ್ರ ಖಾಲಿ ಇರುವ ಯಮಕನಮರಡಿ, ಬೆಳಗಾವಿ ಉತ್ತರ ಇಲ್ಲವೇ ಗೋಕಾಕನಲ್ಲಿ ಬಾಲಚಂದ್ರ ಸ್ಪರ್ಧಿಸಲಿ ಎಂದು ಕಡಾಡಿ ಸಲಹೆ ನೀಡಿದರು.ನನ್ನ ಅಭ್ಯರ್ಥಿತನವನ್ನು ಗಂಭೀರವಾಗಿ ಪರಿಗಣಿಸಿ ಅರಭಾವಿಯಲ್ಲಿ ಅವಕಾಶ ಕೊಡಬೇಕು. ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರಿಗೆ ಬೆಳಗಾವಿ ಕೋರ್ ಕಮಿಟಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅವರು ಅಭಯ ನೀಡಿದ್ದಾರೆ. ಬಿಜೆಪಿ ಮೂಲ ಕಾರ್ಯಕರ್ತರ ಪೈಕಿ ಅಭಯ ಪಾಟೀಲ ಒಬ್ಬರೆ ಪಕ್ಷದಲ್ಲಿ ಶಾಸಕರಾಗಿರುವುದು ಎಂದು ಮಾರ್ಮಿಕವಾಗಿ ನುಡಿದರು.