SHARE

ಬೆಳಗಾವಿ:ಎಂಇಎಸ್ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಕೇಂದ್ರದ ಭಾಷಾ ಅಲ್ಪಸಂಖ್ಯಾತ ಆಯೋಗದ ಕಾನೂನು ಬೆಳಗಾವಿಯಲ್ಲಿ ದುರುಪಯೋಗ ಮಾಡಿಕೊಳ್ಳಲು ಯತ್ನಿಸುತ್ತಿದೆ.ಕಸಾಪ ಭವನದಲ್ಲಿ ನಡೆದ ಕನ್ನಡಿಗರ ಸಮಾಲೋಚನಾ ಸಭೆಯಲ್ಲಿ ಕನ್ನಡ ಮುಖಂಡರು ಮಾತನಾಡಿದರು.

ಎಂಇಎಸ್ ಮುಖಂಡ ಕಿರಣ ಠಾಕೂರ ಜಿಲ್ಲಾಧಿಕಾರಿ ಎನ್. ಜಯರಾಮ ಅವರೊಂದಿಗೆ ಕಾಲು ಕೆದರಿ ಜಗಳ ತೆಗೆಯುವ ಯತ್ನ ಈಗಾಗಲೇ ಮಾಡಿದ್ದು, ಅದಕ್ಕೆ ತಕ್ಕ ಉತ್ತರ ಕೊಟ್ಟ ಡಿಸಿ ನಡೆಯನ್ನು ನಾವು ಅಭಿನಂದಿಸುತ್ತೇವೆ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ತಿಳಿಸಿದರು.ತಾಕತ್ತು ಇದ್ದರೆ ಕಿರಣ ಠಾಕೂರ್ ನಗರ ಉತ್ತರ ಭಾಗಕ್ಕೆ ಎಲೆಕ್ಷನ್ ನಿಲ್ಲಲಿ ಅವರ ಡಿಪಾಸಿಟ್ ಹಿಂದಿರುಗಿ ಸಿಗದಂತೆ ಮಾಡುತ್ತೇವೆ. ಕ್ಷುಲಕ್ ರಾಜಕಾರಣ ಅವರು ಬಿಡಬೇಕು ಎಂದು ಕನ್ನಡ ಮುಖಂಡರು ಗುಡುಗಿದರು.

ಹಿರಿಯ ಐಎಎಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯೊಂದಿಗೆ ನಡೆದುಕೊಳ್ಳಬೇಕಾದ ರೀತಿ ನೀತಿಯ ಸಾಮಾನ್ಯ ಜ್ಞಾನ ಕಿರಣ ಠಾಕೂರ್ ಗೆ ಇಲ್ಲ. ಮರಾಠಿಗರಿಗೆ ಸಿಂಹಸ್ವಪ್ನ ಆಗಿರುವ ಜಿಲ್ಲಾಧಿಕಾರಿ ಎನ್. ಜಯರಾಮ ಅವರನ್ನು ಸರಕಾರ ಇನ್ನೊಂದು ವರ್ಷ ಇಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ತಾಲೂಕುಗಳಲ್ಲಿ ಕನ್ನಡ ಶಾಲೆ, ಭಾಷೆ, ವ್ಯವಹಾರ ಹಾಗೂ ಕನ್ನಡಿಗರ ಜೀವನವನ್ನು ತುಳಿಯುವ ಯತ್ನ ನಡೆಸಿದೆ. ಬೆಳಗಾವಿಯಲ್ಲಿ ಮರಾಠಿ ಬಸ್ ಬೋರ್ಡ್, ಕಾಗದ ಪತ್ರಗಳು ಮರಾಠಿಯಲ್ಲಿ, ಜಿಲ್ಲಾಸ್ಪತ್ರೆ, ಕಚೇರಿಗಳಲ್ಲಿ ಮರಾಠಿ ಬರೆಸಬೇಕೆಂಬ ಎಂಇಎಸ್ ಬೇಡಿಕೆಯನ್ನು ಕಸದ ಬುಟ್ಟಿಗೆ ಹಾಕಬೇಕು. ಮಹಾರಾಷ್ಟ್ರದಿಂದ ಬರುವ ಎಲ್ಲ ಬಸ್ಸುಗಳಿಗೆ ಕನ್ನಡ ಬೋರ್ಡ್ ಹಾಕಿಕೊಳ್ಳಲಿ ಆ ನಂತರ ಬೆಳಗಾವಿ ಜಿಲ್ಲಾಡಳಿತ ಅವರ ಬೇಡಿಕೆ ಪರಿಶೀಲಿಸಬಹುದು.

ಮರಾಠಿ ಪತ್ರಿಕೆಗಳಲ್ಲಿ ಬೆಲಗಾವ್ ಎಂದು ಬರೆಸುವ ಪುಂಡತನ ಕಿರಣ ಠಾಕೂರ್ ಬಿಡಬೇಕು. ಜಿಲ್ಲಾಡಳಿತ ತರುಣ ಭಾರತ ಪತ್ರಿಕೆ ಬಂದ್ ಮಾಡಿಸಬೇಕು ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಭಾಷಾ ಅಭಿಮಾನ ಮರಾಠಿಗರಿಗೆ ಇರಲಿ ಪರವಾಗಿಲ್ಲ. ಆದರೆ ಇಲ್ಲೇ ತಿಂದು ಉಂಡು ನೀರು ಕುಡಿದು ಕನ್ನಡಿಗರಿಗೆ, ಜಿಲ್ಲಾಡಳಿತಕ್ಕೆ ಶೆಡ್ಡು ಹೊಡೆಯುವ ಪುಂಡ ಧೈರ್ಯ ಕಿರಣ ಠಾಕೂರ ಬಿಡಬೇಕು ಎಂದು ಕನ್ನಡ ನಾಯಕರು ಎಚ್ಚರಿಸಿದರು.

ಕನ್ನಡ ಮರಾಠಿ ಜನರ ಸೌಹಾರ್ಧತೆ ಕೆಡಿಸುತ್ತ ತನ್ನ ಉದ್ಯೋಗ ವ್ಯಾಪಾರ ವಿಸ್ತರಿಸಿಕೊಳ್ಳಲು ಕಿರಣ ಠಾಕೂರ ಮತ್ತಿತರರು ಯತ್ನಿಸುತ್ತಿದ್ದಾರೆ ಎಂದರು.ಜಿಲ್ಲಾಧಿಕಾರಿ ಎನ್. ಜಯರಾಮ ಅವರನ್ನು ಇಲ್ಲೇ ಉಳಿಸಿಕೊಳ್ಳುತ್ತೇವೆ, ಅವರು ವರ್ಗಾವಣೆಯಾದರೆ ಕನ್ನಡಿಗರ ಕಿಚ್ಚು ಉಗ್ರ ಹೋರಾಟವಾಗಿ ಪರಿವರ್ತನೆಯಾಗುತ್ತದೆ ಎಂದು ಕರ್ನಾಟಕ ನವನಿರ್ಮಾಣ ಪಡೆ ರಾಜ್ಯಾಧ್ಯಕ್ಷ ವಿ. ಶಂಕರ ದೇಸಾಯಿ ನಿರ್ಧಾರ ಪ್ರಕಟಿಸಿದರು.

ಸಿದ್ಧನಗೌಡ ಪಾಟೀಲ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಅನಂತ ಬ್ಯಾಕೂಡ್, ಕಸ್ತೂರಿ ಭಾವಿ ಇತರರು ಭಾಗವಹಿಸಿದ್ದರು.