SHARE

ಬೆಳಗಾವಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಳಗಾವಿ ಅರಣ್ಯ ವಿಭಾಗ ಹಾಗೂ ಜಿಪಂ. ಸಾಮಾಜಿಕ ಅರಣ್ಯ ವಿಭಾಗದಿಂದ ಇಂದು ಮಚ್ಛೆ ಬಳಿ ವಿಟಿಯು ಆವರಣದ ಹೊರಗೆ ನಿರ್ಮಿಸಿರುವ ನೂತನ ಜೈವಿಕ ಉದ್ಯಾನ(Biological park) ದಲ್ಲಿ ವಿನೂತನ ಕಾರ್ಯಕ್ರಮ ಏರ್ಪಡಿಸಲಾಯಿತು.ನಗರದ ಗಣೇಶಪುರ ಗುಡ್ ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳಿಂದ ಶ್ರಮದಾನ, ಸಸಿನೆಡುವ ಕಾರ್ಯಕ್ರಮ ನಡೆಯಿತು.

ಜಿಪಂ. ಸಿಇಓ ಡಾ.ರಾಮಚಂದ್ರನ್,ಸಿಸಿಎಫ್ ಕೆ.ಡಿ. ಉದಪುಡಿ, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ ಓ ಅಶೋಕ ಪಾಟೀಲ, ಎಸಿಎಫ್ ಶಿವಾನಂದ ನಾಯಿಕವಾಡಿ, ಆರ್ ಎಫ್ ಓ ಮನೋಹರ ಕಡೋಲಕರ ಹಾಗೂ ನಾಗರಾಜ ಬಾಳೆಹೊಸೂರ ಮಕ್ಕಳೊಂದಿಗೆ ಮಕ್ಕಳಾಗಿ ಶ್ರಮದಾನ ಮಾಡಿ ಪರಿಸರದ ಬಗ್ಗೆ ಹರಟೆ, ಚರ್ಚೆ ನಡೆಸಿದರು.ವಿವಿಧ ಗಿಡಮರ ಪ್ರಕಾರಗಳು, ಹವಾಮಾನ ವೈಪರಿತ್ಯಕ್ಕೆ ಕಾರಣ, ಪರಿಸರ ಕಾಯ್ದು ಬೆಳೆಸಲು ನಾಗರಿಕರ ಕರ್ತವ್ಯ ಕುರಿತು ಮಕ್ಕಳೊಂದಿಗೆ ಸಮಾಲೋಚನೆ ನಡೆಯಿತು.ಸಸಿಗಳನ್ನು ಬೆಳೆಸುವ ಕ್ರಮ ಪ್ರಯೋಜನಗಳ ಪ್ರಾಯೋಗಿಕ ಪ್ರಾತಕ್ಷಿಕೆ ನಡೆಸಲಾಯಿತು. ಜಿಪಂ.ಸಿಇಓ ಪರಿಸರ ಸಂಬಂಧಿ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳಿಂದ ಉತ್ತರ ಪಡೆದು ವಿದ್ಯಾರ್ಥಿಗಳೊಂದಿಗೆ ಶ್ರಮದಾನದಲ್ಲಿ ಭಾಗಿಯಾದರು.

ಕಾಡು ಬೆಳೆಸುವುದು ಮತ್ತು ಪರಿಸರದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮಾರ್ಗದರ್ಶನ ನೀಡಲಾಯಿತು.
ಶ್ರಮದಾನದ ಅಂಗವಾಗಿ ಹಲವು ಬಗೆಯ ಸಸಿಗಳನ್ನು ನೆಡಲಾಯಿತು.ಉದ್ಯಾನ ನಿರ್ಮಾಣದ ಹಂತಗಳ ಬಗ್ಗೆ ಪರಿಶೀಲನೆ ನಡೆಯಿತು. ಮಕ್ಕಳು ಸುಂದರ ಪರಿಸರದಲ್ಲಿ ಉಪಹಾರ ಸೇವಿಸಿ ಸಂತಸ ಪಟ್ಟರು.