SHARE

ಬೆಳಗಾವಿ: ಬಿಜೆಪಿ ನಾಯಕ ಪ್ರಹ್ಲಾದ ಜೋಶಿ ಅವರಿಗೆ ಜೆಡಿಎಸ್ ಬಗ್ಗೆ ದೊಡ್ಡದಾಗಿ ಮಾತನಾಡುವ ನೈತಿಕತೆ ಇದೆಯೇ ಎಂದು ಜೆಡಿಎಸ್ MLC ಟಿ.ಎ.ಶರವಣ ತಿರುಗೇಟು ನೀಡಿದ್ದಾರೆ.ನಗರದ ಖಾಸಗಿ ಹೊಟೇಲನಲ್ಲಿ thebelgaumnews.com ನೊಂದಿಗೆ ಮಾತನಾಡಿ ಜೆಡಿಎಸ್ ಗೆ ಭವಿಷ್ಯವಿಲ್ಲ ಎನ್ನುವ ಪ್ರಹ್ಲಾದ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ. ಮಹಾದಾಯಿ, ಕಳಸಾ ಬಂಡೂರಿಯಂತಹ ನಿಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಮಗೆ ಆಗಿಲ್ಲ.ಕೇಂದ್ರದಲ್ಲಿ ನಿಮ್ಮದೇ ಸರಕಾರವಿದ್ದಾಗಲೂ ಕುಡಿಯುವ ನೀರಿನ ಹಂಚಿಕೆ ಬೇಡಿಕೆ ಈಡೇರಿಸದೆ ಜೆಡಿಎಸ್ ಪಕ್ಷದ ಬಗ್ಗೆ ಮಾತಾಡುವುದು ಉಚಿತವಲ್ಲ ಎಂದು ಶರವಣ ಸಲಹೆ ನೀಡಿದ್ದಾರೆ.

ಜಲ್ಲಿಕಟ್ಟು ತಮಿಳುನಾಡಿನಲ್ಲಿ ತರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬರೀ 24 ಗಂಟೆಯಲ್ಲಿ ಮಸೂದೆ, ಕಾನೂನು ತಂದು ರೆಸ್ಯೂಲೇಶನ್ ಪಾಸ್ ಮಾಡುತ್ತಾರೆ. ಇತ್ತ ಕರ್ನಾಟಕ ಗೋವಾ ನಡುವಿನ ನೀರು ಹಂಚಿಕೆಯ ಸಮಸ್ಯೆ ಬಗೆಹರಿಸಲು ಕೇಂದ್ರಕ್ಕೆ(ಪ್ರಧಾನಿಗೆ) ಮನಸ್ಸಿಲ್ಲವೆಂದರೆ ಏನರ್ಥ.ಕರ್ನಾಟಕ, ಗೋವಾ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಒಂದೆಡೆ ಕೂಡ್ರಿಸಿ ಸಮಸ್ಯೆ ಇತ್ಯರ್ಥ ಮಾಡಲು ಬಿಜೆಪಿ ಕೈಯಲ್ಲಿ ಆಗಿಲ್ಲ. ಪ್ರಧಾನಿ ಈ ಬಗ್ಗೆ ಗಮನ ಹರಿಸಲಿ ನೊಡೋಣ ಎಂದು ಕಿಚಾಯಿಸಿದರು.

ಇವತ್ತು ರೈತರ ಸಾಲ ಮನ್ನಾ ವಿಚಾರ ಬಂದಾಗ ರೈತರ ಹೆಸರಲ್ಲಿ ಬಿಜೆಪಿ ಕಾಂಗ್ರೆಸ್ ಮೀನಾಮೇಷ ಮಾಡುತ್ತಿವೆ. ಕೇಂದ್ರ ರಾಜ್ಯದತ್ತ, ರಾಜ್ಯ ಕೇಂದ್ರದತ್ತ ಬೊಟ್ಟು ಮಾಡಿ ಕೆಸರೆರಚಾಟದಲ್ಲೇ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.ಇಂದು ರೈತ ಬಡ ಕೂಸಾಗಿದ್ದಾನೆ ಕೇಂದ್ರ ಸರಕಾರ ಮನಸ್ಸು ಮಾಡಿದ್ದರೆ ಸಾಲಮನ್ನಾ ಮಾಡುವುದು ದೊಡ್ಡ ವಿಷಯವೇ? ರಾಜ್ಯ ಕಾಂಗ್ರೆಸ್ ಸರಕಾರವೂ ಅಷ್ಟೇ.ರೈತರ ಸಾಲ ಮನ್ನಾ ಮಾಡುವುದು ಬಿಟ್ಟು ಸ್ಟೀಲ್ ಬ್ರಿಡ್ಜ್, ಅದು ಇದು ಎಂಬ ಅರ್ಥವಿಲ್ಲದ ದಿನಕ್ಕೊಂದು ಯೋಜನೆಗಳನ್ನು ಜಾರಿಗೆ ತಂದು ಜನರ ತೆರಿಗೆ ಹಣ ಪ್ಯಾಕೇಜ್ ರೂಪದಲ್ಲಿ ಲೂಟಿ ಮಾಡುತ್ತಿದ್ದಾರೆ.ಯಾಕೆ ರೈತರು ಮತ್ತು ಅಸಹಾಯಕ ಜನರಿಗೆ ಸಂಕಷ್ಟ ಕೊಡುತ್ತಿದ್ದೀರಿ ಎಂದು ಕಾಂಗ್ರೆಸ್ ಬಿಜೆಪಿ ಇಬ್ಬರೂ ಸ್ಪಷ್ಠಪಡಿಸಲಿ.

ರೈತರ ಸಂಕಷ್ಟ ಪರಿಹರಿಸುವ ಒಬ್ಬನೇ ಕನ್ನಡಿಗ ಮಾಜಿ ಮುಖ್ಯಮಂತ್ರಿ ಕುಮಾರಣ್ಣ.ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ.ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್ ನಿಂತ ಸ್ಥಳದಲ್ಲೇ ಪಟಾಪಟ್ ತನ್ನ ದಿಟ್ಟ ನೀತಿ ನಿರ್ಧಾರಗಳನ್ನು ಪ್ರಕಟಿಸಲಿದೆ ಎಂದರು.

ರಾಜ್ಯದ ಮಹಾಜನತೆ ಬುದ್ಧಿವಂತರಿದ್ದಾರೆ ಯಾರನ್ನು ಎಲ್ಲಿ ಇಡಬೇಕು ಎಂಬುವುದರ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನಿಸುತ್ತಾರೆ.ರೈತರ ಹೆಸರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡಿಕೊಂಡು,ಜನರನ್ನು ದಾರಿ ತಪ್ಪಿಸಿ,ಮತ ಬ್ಯಾಂಕಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಶರವಣ ಹರಿಹಾಯ್ದರು.