SHARE

ಬೆಂಗಳೂರು/ಬೆಳಗಾವಿ: ತಮಗೆ ಸೂಕ್ತ ದಿನಗೂಲಿ ಹಾಗೂ ಸೌಲಭ್ಯಗಳನ್ನು ನೀಡದೆ ಗುತ್ತಿಗೆದಾರ ಕಿರುಕುಳ ನೀಡುತ್ತಿದ್ದಾರೆ ಎಂದು ಸುವರ್ಣಸೌಧದ ಕಾರ್ಮಿಕರು ಗುರುವಾರ ಜಿಲ್ಲಾಡಳಿತದ ಬಾಗಿಲು ತಟ್ಟಿದ್ದ ಬೆನ್ನಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಕ್ಕನ್ನ ಸವಸುದ್ದಿ ಕಾರ್ಮಿಕರ ಪರವಾಗಿ ವಿಧಾನಸಭಾಧ್ಯಕ್ಷ ಕೆ. ಬಿ. ಕೋಳಿವಾಡ ಅವರಿಗೆ ಶುಕ್ರವಾರ ಸಂಜೆ ಮನವಿ ಸಲ್ಲಿಸಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಸುವರ್ಣವಿಧಾನಸೌಧದ ಸ್ವಚ್ಛತಾ ಕಾರ್ಯದ ಕಾರ್ಮಿಕರಿಗೆ ಗುತ್ತಿಗೆದಾರ ಸಮೀರ ಶಿರಗುಪ್ಪಿ ಎಂಬುವವರು ಕಿರುಕುಳ ನೀಡಿ, ಕಾರ್ಮಿಕರ ದಿನಗೂಲಿ ಹಣ ಕಡಿತ ಮಾಡಿ ಕೊಡುತ್ತಿರುವುದು, ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಸಿದುಕೊಂಡಿರುವುದು ಜತೆಗೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ, ತಮ್ಮ ಹಾಗೂ ತಮ್ಮ ಪರಿಚಿತರ ಮನೆಗೆಲಸಕ್ಕೆ ಸುವರ್ಣಸೌಧ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ಕಾರ್ಮಿಕರು ಆರೋಪಿಸಿ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದರಿಂದ ಗುತ್ತಿಗೆದಾರ ಸಮೀರ ಶಿರಗುಪ್ಪಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾರ್ಮಿಕರ ಹಿತ ಕಾಯುವಂತೆ ಲಕ್ಕನ್ನ ಸವಸುದ್ದಿ ಸಭಾಧ್ಯಕ್ಷರನ್ನು ಆಗ್ರಹಿಸಿದ್ದಾರೆ.

ಕೂಡಲೇ ವಿಧಾನಸಭಾ ಕಾರ್ಯದರ್ಶಿ ಎ.ಎಸ್.ಮೂರ್ತಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ ಅವರಿಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗುವುದು ಎಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಪ್ರತಿಕ್ರಿಯಿಸಿ ಭರವಸೆ ನೀಡಿದ್ದಾರೆ. ವಿಧಾನಸಭೆಯ ಮಾಜಿ ಕಾರ್ಯದರ್ಶಿ ವೈ.ಎಸ್.ಕುಳಗೇರಿ ಉಪಸ್ಥಿತರಿದ್ದರು.