SHARE

ಬೆಳಗಾವಿ: ಅಚ್ಚ ಮರಾಠಿ ಭಾಷಿಕ ಕಲಾವಿದರೊಬ್ಬರು, ಅಚ್ಚ ಕನ್ನಡ ನಾಡಗೀತೆ ವಾದಕರಾಗಿ ಬೆಳಗಾವಿ ಸರಕಾರಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ಜಿಲ್ಲಾಡಳಿತಕ್ಕೆ ಹೆಗಲುಗೊಟ್ಟು ಗಮನಸೆಳೆದಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಮರಾಠಿ ಭಾಷಾ ಹಾಗೂ ಗಡಿ ವಿವಾದ ಏನೇ ಇದ್ದರೂ ಬರೀ ರಾಜಕೀಯ ಪುಢಾರಿಗಳ ನಡುವಿನದು ಹೊರತು, ಇಲ್ಲಿ ಒಂದಾಗಿ ಬದುಕುವ ಜನರ ಮಧ್ಯೆ ಅಲ್ಲ ಎನ್ನುವುದು ಸ್ಪಷ್ಠಗೊಳ್ಳುವ ಇಂಥ ಅನೇಕ ನಿದರ್ಶನಗಳು ನಮ್ಮ ಮುಂದಿವೆ.

ವಿನಾಯಕ ಮೋಹನ ಮೋರೆ ಹಿರಿಯ ಸಂಗೀತ ಕಲಾವಿದರಾಗಿ ಪ್ರಸ್ತುತ ಪಡಿಸುವ ಜೈ ಭಾರತ ಜನನೀಯ ತನುಜಾತೆ ಜಯಹೇ ಕರ್ನಾಟಕ ಮಾತೆ… ಎಂಬುವುದಾಗಿ ಹಾಡು ಶುರು ಮಾಡಿದರೆ ವೀಕ್ಷಕರ ಮನದೂಗುವಂತೆ ಮಾಡುತ್ತದೆ. ನಗರದ ವಡಗಾವಿ ಸಂಭಾಜಿ ನಗರದ ಸ್ವರಾಂಜಲಿ ಸಂಗೀತ ಶಾಲೆ ಮೂಲಕ ಕಳೆದ 20 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಂಗೀತ ದಾಸೋಹ ನೀಡುತ್ತಿರುವ ವಿನಾಯಕ ಮೋರೆ ಅವರ ಮಾತೃಭಾಷೆ ಮರಾಠಿ. ನಗರದ ಸಾಗರ ಬಿಎಡ್ ಕಾಲೇಜು, ಜೈನ್ ಮಹಿಳಾ ಬಿಎಡ್ ಮಹಾವಿದ್ಯಾನಿಲಯ ಸೇರಿ ಸುಮಾರು 9 ಕಾಲೇಜುಗಳಲ್ಲಿ ಸಂಗೀತ ಉಪನ್ಯಾಸಕರಾಗಿ ಗಮನ ಸೆಳೆದಿದ್ದಾರೆ .

ಭಾವಗೀತೆಗಳ ಪ್ರಕಾರದಲ್ಲಿ ….ಕನ್ನಡಾಂಬೆ ಗುಡಿಯಲ್ಲಿ ಇಗೋ ಪೂಜೆ ನಡೆದಿದೆ…, …ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ…, ….ವಿಶ್ವವಿನೂತನ ವಿಧ್ಯಾಚೇತನ ಸರ್ವ ಹೃದಯ ಸಂಸ್ಕಾರಿ…. ಸೇರಿದಂತೆ ಹತ್ತು ಹಲವಾರು ಲಯಬದ್ಧವಾಗಿ ಕನ್ನಡದ ನಾಡು ನುಡಿ ಮತ್ತು ಭಾರತೀಯ ಸಂಸ್ಕೃತಿ ಸಾರುವ ಹಾಡುಗಳನ್ನು ಜಿಲ್ಲಾಡಳಿತದ ಸರಕಾರಿ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡಿ, ಜನರಿಗೆ ಹಾಡಿಸಿ ಭಾವೈಕ್ಯತೆ ಮೆರೆದಿದ್ದಾರೆ ವಿನಾಯಕ ಮೋರೆ.

ವಿಶ್ವಕನ್ನಡ ಸಮ್ಮೇಳನದಲ್ಲಿ ಮೋರೆ: 2011 ರ ಮಾರ್ಚ್ 11 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತ್ರತ್ವದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸುಮಾರು 500 ವಿದ್ಯಾರ್ಥಿಗಳಿಂದ ನಾಡಗೀತೆ, ನೆರೆದಿದ್ದ ಸುಮಾರು ಲಕ್ಷ ಜನತೆ ಎದುರು ಪ್ರಸ್ತುತಪಡಿಸಿದ ಹೆಮ್ಮೆ ವಿನಾಯಕ ಅವರದು. ಕಲೆಗಾರನಿಗೆ, ಸಂಗೀತಗಾರನಿಗೆ ಚಿತ್ರಗಾರನೊಬ್ಬನಿಗೆ ಒಟ್ಟಾಗಿ ಕಲಾವಂತನಿಗೆ ಭಾಷೆ, ಜಾತಿ, ಗಡಿಯ ಹಂಗಿಲ್ಲ ಎಂಬುವುದು ವಿನಾಯಕ ಅವರ ಅಭಿಪ್ರಾಯ.

ಪ್ರತಿ ಭಾನುವಾರ ಉಚಿತ ಸಂಗೀತ ಶಿಕ್ಷಣ: ಪ್ರತಿ ಭಾನುವಾರ ಸಂಭಾಜಿ ನಗರದಲ್ಲಿ ಸಾರ್ವಜನಿಕರಿಗೆ ಉಚಿತ ಸಂಗೀತ ಶಿಕ್ಷಣವನ್ನು ಸಮಾಜ ಸೇವೆಯಾಗಿ ವಿನಾಯಕ ಮೋರೆ ನೀಡುತ್ತ ಬಂದಿದ್ದಾರೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪನಿರ್ದೇಶಕಿ ವಿಧ್ಯಾವತಿ ಭಜಂತ್ರಿ ಪ್ರತಿಕ್ರಿಯಿಸಿ ವಿನಾಯಕ ಮೋರೆ ಮರಾಠಿ ಭಾಷಿಕರಾದರೂ ಅಚ್ಛಗನ್ನಡದಲ್ಲಿ ಕನ್ನಡ ನಾಡಿನ ವೈಭವ ಮೆರೆಯುವ ಕನ್ನಡ ಗೀತೆಗಳನ್ನು ಹಾಡಿ ಧನ್ಯತೆ ವ್ಯಕ್ತಪಡಿಸುತ್ತಾರೆ. ಸರಕಾರಿ ಕಾರ್ಯಕ್ರಮಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆಯುತ್ತಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸಂಘ ಸಂಸ್ಥೆಗಳ ಗೌರವಾಧರಗಳಿಗೆ ಪಾತ್ರರಾದ ವಿನಾಯಕ ಅವರಿಗೆ ರಾಜ್ಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಂಗೀತ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಸ್ಮರಣೀಯ.

ಜೂ.21ರ ವಿಶ್ವಯೋಗ ಮತ್ತು ವಿಶ್ವಸಂಗೀತ ದಿನದಂಗವಾಗಿ ಅಪ್ಪಟ ಮರಾಠಿ ಭಾಷಿಕನಾದರೂ, ಅಪ್ಪಟ ಕನ್ನಡ ಕುವರನಾಗಿರುವ ವಿನಾಯಕ ಮೋರೆ ಅವರನ್ನು ಪರಿಚಯಿಸಲು thebelgaumnews.com ಅಭಿಮಾನ ವ್ಯಕ್ತಪಡಿಸುತ್ತದೆ