SHARE

ಬೆಳಗಾವಿ: ಮಲೇರಿಯಾ, ಡೆಂಗೀ ಹಾಗೂ ಚಿಕುನ್ ಗುನ್ಯಾ ರೋಗಗಳ ಬಗ್ಗೆ ಮಳೆಗಾಲದಲ್ಲಿ ಜನತೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಎಂ. ಎಸ್. ಪಲ್ಲೇದ ತಿಳಿಸಿದ್ದಾರೆ. ವಾರ್ತಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರೋಗಗಳ ಬಗ್ಗೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ವಿಷಯ ಕುರಿತು ಮಾತನಾಡಿ ಮಳೆಗಾಲದಲ್ಲಿ ಸೊಳ್ಳೆ ಮತ್ತಿತರ ಕೀಟಗಳ ಕಡಿತದಿಂದ ಮಲೇರಿಯಾದಂಥ ಭಯಾನಕ ರೋಗಗಳು ಬರುತ್ತವೆ.

ಯಾವುದೇ ಜ್ವರವನ್ನು ಸಹ ನಿರ್ಲಕ್ಷಿಸಬಾರದು ಅದು ಮಲೇರಿಯಾ ಇಲ್ಲವೇ ಡೆಂಗೀ ಸಹ ಇರಬಹುದು. ಮಲೇರಿಯಾ ಎಂಬುವುದು ಖಚಿತಪಟ್ಟಾಗ ಕ್ಲೋರೊಕ್ವೀನ್, ಪ್ರೈಮಾ ಕ್ವೀನ್ ನಂಥ ಮಾತ್ರೆಗಳನ್ನು ತತ್ ಕ್ಷಣ ತೆಗೆದುಕೊಳ್ಳಬೇಕಾಗುತ್ತದೆ. ಇಂಥ ಔಷಧಿಗಳು ಎಲ್ಲ ಸರಕಾರಿ ಆಸ್ಪತ್ರೆ ಮತ್ತು ಪಿಎಚ್ ಸಿ ಗಳಲ್ಲಿ ಲಭ್ಯವಿವೆ ಎಂದರು. ಮಕ್ಕಳು ಮತ್ತು ಗರ್ಭಿಣಿಯರನ್ನು ಸೊಳ್ಳೆ ಕಡಿತದಿಂದ ರಕ್ಷಿಸಬೇಕು. ಕಿಟಗಿ ಬಾಗಿಲುಗಳನ್ನು ಮುಚ್ಚಿಕೊಂಡು ಇಲ್ಲವೇ ಸಾಂಬ್ರಾಣಿ ಮತ್ತಿತರ ಬೇವಿನ ತಪ್ಪಲದಿಂದ ಬೆಂಕಿ ಮಾಡಿಕೊಂಡು ಮನೆಗಳಲ್ಲಿ ಹೊಗೆ ಮೂಲಕ ಸೊಳ್ಳೆ ನಿಯಂತ್ರಣ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಫಲಕ, ಬರಹಗಳನ್ನು ಅಳವಡಿಸಲಾಗುತ್ತಿದೆ ಎಂದರು.