SHARE

ಬೆಳಗಾವಿ: ಗೋಕಾಕ ಟೆಕ್ಸಟೈಲ್ಸ್ ಮಿಲ್ ಕಾರ್ಮಿಕ ಕಲ್ಲಪ್ಪ ಬೋಲು ಎಂಬುವರು ಡಿಸಿ ಕಚೇರಿ ಎದುರು ವಿಷ ಸೇವಿಸಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಮರುತನಿಖೆಗೆ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ಕೋರ್ಟ್ ಆದೇಶಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಕರಣದ ವಾದಿ Adv. ಎಸ್. ಆರ್. ಯಡಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡದೇ ಅಬೇಟ್ ಚಾರ್ಜ್ ಸೀಟ್ ಹಾಕಿದ್ದ ಮಾರ್ಕೇಟ್ ಪೊಲೀಸರ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನೊಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಗೋಕಾಕ ಮಿಲ್ ಕಾರ್ಮಿಕರ ಪೈಕಿ ಕಲ್ಲಪ್ಪ ಸ್ವತಃ ಜಿಲ್ಲಾಧಿಕಾರಿ ಅವರು ಉಪಸ್ಥಿತರಿರುವಾಗಲೇ ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಪ್ರಕರಣದ ವಾದ ಆಲಿಸಿದ ನ್ಯಾಯಾಲಯ ಕಲ್ಲಪ್ಪ ಬೋಲು ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ವಿಫಲರಾಗಿದ್ದಾರೆ, ಪೊಲೀಸರು ಸರಿಯಾದ ಕ್ರಮದಲ್ಲಿ ತನಿಖೆ ನಡೆಸಿಯೇ ಇಲ್ಲ. ಇತರ ಕಾರ್ಮಿಕರು, ಕಾರ್ಮಿಕ ಇಲಾಖೆಯದ್ದಾಗಲಿ, ಕಾರ್ಮಿಕ ಸಂಘದ ಅಧ್ಯಕ್ಷರದ್ದಾಗಲಿ, ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಸಂಘಗಳದ್ದಾಗಲಿ, ಇಲ್ಲವೇ ಜಿಲ್ಲಾಧಿಕಾರಿಗಳ ಹೇಳಿಕೆ ಪಡೆದಿಲ್ಲ ಎಂದು ತನಿಖಾ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿ ಬೋಲು ಪ್ರಕರಣ ಮರು ತನಿಖೆಗೆ ಆದೇಶಿಸಿದ್ದಲ್ಲದೇ, ಕಾರ್ಮಿಕನ ಸಾವಿಗೆ ಸ್ವತಃ ಘನ ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಪ್ರಕರಣವೊಂದರ ತನಿಖೆ ಪೊಲೀಸರು ನ್ಯಾಯಯುತವಾಗಿ, ಸೂಕ್ತ ಕ್ರಮದಲ್ಲಿ ಮಾಡಿಲ್ಲ ಎಂದು ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯ ಅಭಿಪ್ರಾಯಪಟ್ಟಿರುವುದು; ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಸಂಶಯ ಪಡುವಂತೆ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಭಾಸ್ಕರ ಪಾಟೀಲ, ಮೃತ ಕಾರ್ಮಿಕನ ಪತ್ನಿ ಮಕ್ಕಳು ಮತ್ತಿತರರು ಹಾಜರಿದ್ದರು.