SHARE

ಬೆಳಗಾವಿ/ಖಾನಾಪುರ: ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದಲ್ಲಿ ಸೋಮವಾರ ದಿನದಂದು ಪ್ರಜಾವಾಣಿ ಪತ್ರಕರ್ತ ಪ್ರಸನ್ನ ಕುಲಕರ್ಣಿ ಬೇಕವಾಡ ಗ್ರಾಪಂ ಅಧ್ಯಕ್ಷರ ಚುನಾವಣೆ ನಿಮಿತ್ಯ ವರದಿಗೆ ತೆರಳಿದಾಗ ನಂದಗಡ ಪೋಲಿಸ್ ಠಾಣೆಯ ಪಿ.ಎಸ್.ಐ ಯು.ಎಸ್.ಅವಟೆ ಸಾರ್ವಜನಿಕರ ಸಮ್ಮುಖದಲ್ಲಿ ಮಾತಿನ ಚಕಮಕಿಯ ನಂತರ ಹಿಗ್ಗಾಮುಗ್ಗಾ ಅವರನ್ನು ಥಳಿಸಿ, ಪೋಲಿಸ ವಾಹನದಲ್ಲಿ ಠಾಣೆಗೆ ಕರೆತಂದ ಘಟನೆ ನಡೆದಿತ್ತು. ಸುದ್ದಿ ತಿಳಿದ ತಕ್ಷಣ ನಂದಗಡ ಠಾಣೆಯ ಎದುರುಗಡೆ ಜಮಾಯಿಸಿದ ತಾಲೂಕಾ ಪತ್ರಕರ್ತರು ಪಿ.ಎಸ್.ಐ ಅನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ನಂದಗಡ ಠಾಣೆಯ ಎದುರುಗಡೆ ಧರಣಿ ಕುಳಿತರು.

ವಿಷಯ ತಿಳಿದ ನಂತರ ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠ ಅಧಿಕಾರಿ ರವೀಂದ್ರ ಗಡಾದ ಅವರು ನಂದಗಡ ಠಾಣೆಗೆ ಆಗಮಿಸಿ ಧರಣಿ ನಿರತ ಪತ್ರಕರ್ತರನ್ನು ಭೇಟಿಮಾಡಿದಾಗ,ಖಾನಾಪೂರ ತಾಲೂಕಾ ಪತ್ರಕರ್ತರ ಸಂಘದ ವತಿಯಿಂದ ಮನವಿ ನೀಡಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಅವರು ಇದು ತಾಲೂಕಿನಲ್ಲಾದ ಮೊದಲ ಘಟನೆ ಇದರಿಂದ ಎಲ್ಲ ಪತ್ರಕರ್ತರಿಗೆ ತುಂಬಾ ನೋವನ್ನುಂಟು ಮಾಡಿದೆ. ಆದ್ದರಿಂದ ತಪ್ಪಿತಸ್ಥ ಪಿ.ಎಸ್.ಐ. ವಿರುದ್ಧ ಕಾನೂನು ಕ್ರಮ ಕೈಕೊಂಡು ಅಮಾನತ್ತು ಮಾಡಲು ಒತ್ತಾಯಿಸಿದರು. ಅದರಂತೆ ಪತ್ರಕರ್ತರಿಗೆ ಪಿ.ಎಸ್.ಐ.ಅವರಿಂದ ಜೀವಬೆದರಿಕೆ ಇರುವುದರಿಂದ ಸೂಕ್ತಭದ್ರತೆ ನೀಡಬೇಕೆಂದು ಆಗ್ರಹಿಸಿದರು. ತಕ್ಷಣ ಕ್ರಮ ಕೈಕೊಳ್ಳದಿದ್ದರೆ ಮತ್ತೆ ಧರಣಿ ಕೈಕೊಳ್ಳುತ್ತೇವೆ ಎಂದರು.

ಧರಣಿ ನಿರತರ ಪತ್ರಕರ್ತರ ಮನವಿ ಸ್ವಿಕರಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠ ಅಧಿಕಾರಿ ರವೀಂದ್ರ ಗಡಾದ ಅವರು ಈ ರೀತಿ ಘಟನೆ ಆಗಬಾರದಿತ್ತು. ಏಕೆಂದರೆ ಪೋಲಿಸ ಮತ್ತು ಪತ್ರಕರ್ತರ ನಡುವೆ ಒಳ್ಳೆಯ ಭಾಂಧವ್ಯವಿದ್ದು,ಪತ್ರಕರ್ತರು ಮತ್ತು ಪೋಲಿಸ್ ಇಲಾಖೆ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುವುದು ಅವಶ್ಯವಿದೆ. ಆದಕಾರಣ ತಪ್ಪು ಎಸಗಿದ ಪೋಲಸ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಕೊಳ್ಳುತ್ತೇನೆ ಎಂದರು. ಈ ಭರವಸೆ ಪಡೆದ ನಂತರ ಪತ್ರಕರ್ತರು ಧರಣಿ ವಾಪಸ್ ಪಡೆದರು.

ಮನವಿ ಅರ್ಪಿಸುವ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ.ಕರುಣಾಕರ ಶೆಟ್ಟಿ, ಪತ್ರಕರ್ತರಾದ ರಾಜು ಕುಂಬಾರ, ಸುಭಾಸ ಪಾಟೀಲ, ಪಿರಾಜಿ ಕುರಾಡೆ, ಕಾಸಿಂ ಹಟ್ಟಿಹೊಳಿ, ಪರಶುರಾಮ ಪಾಲಕಾರ, ಮಹೇಶ ಕದಂ, ಚೇತನ , ಭರತ ಪಾಟೀಲ, ಶಂಕರ, ಅಲತಾಫ್, ಅಪ್ಪಾಜಿ, ಜಗದೀಶ, ಪ್ರಶಾಂತ ಕುಲಕರ್ಣಿ, ಸಂಜಯ ಪರೀಟ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.