SHARE

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲೀಷ ಮಾಧ್ಯಮ ನಡೆಸುತ್ತಿದ್ದ ಪ್ರಾಥಮಿಕ ಶಾಲೆಯ ಮಾನ್ಯತೆ ಹಿಂಪಡೆಯಲಾಗಿದೆ. ನೆರೆಯ ಮಹಾರಾಷ್ಟ್ರ ಮೂಲದ ಶಿಕ್ಷಣ ಸಂಸ್ಥೆಯೊಂದಕ್ಕೆ ನೀಡಿದ ಮಾನ್ಯತಾ ಅನುಮತಿ ರದ್ದಾಗಿದೆ. ಕನ್ನಡ ಭಾಷಾ ನೀತಿ ಪಾಲಿಸದ ಆರ್ಯನ್ ವರ್ಲ್ಡ್ ಶಾಲಾ ಸಂಸ್ಥೆಗೆ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಬಿಸಿ ಮುಟ್ಟಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಅನುಮತಿ ಪಡೆದು ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಇತರ ಶಿಕ್ಷಣ ಸಂಸ್ಥೆಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ಹೌದು…ಆರ್ಯನ್‌ ಫನ್‌ ಸ್ಕೂಲ್ ಕಿರಿಯ ಪ್ರಾಥಮಿಕ ಶಾಲೆ ಮಹಾರಾಷ್ಟ್ರದ ಪುಣೆ ಮೂಲದ ತೇಜಸ್‌ ಏಜ್ಯುಕೇಶನ್‌ ಆಂಡ್‌ ರಿಸರ್ಚ್‌ ಫೌಂಡೇಶನಗೆ ಸೇರಿದ್ದು, ಬೆಳಗಾವಿಯ ಸದಾಶಿವ ನಗರದಲ್ಲಿ ಕಳೆದ 2015 ರಿಂದ ಕಾರ್ಯಾರಂಭ ಮಾಡಿದೆ. ಮಹಾರಾಷ್ಟ್ರ ಮೂಲದ ಶಿಕ್ಷಣ ಸಂಸ್ಥೆಯು ಶಿಕ್ಷಣ ಇಲಾಖೆಯಿಂದ ಕನ್ನಡ ಮಾಧ್ಯಮದಲ್ಲಿ ಪಾಠ ಕಲಿಸುವುದಾಗಿ ಅನುಮತಿ ಪಡೆದು, ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ನಡೆಸುತ್ತಿದ್ದುದು ಆಡಳಿತದ ಗಮನಕ್ಕೆ ಬಂದಿದೆ. ಆರ್ಯನ್‌ ಶಾಲೆ ಆಡಳಿತ ಮಂಡಳಿ ಪೋಷಕರಿಗೆ ಮಾಡುತ್ತಿರುವ ಮೋಸದ ಬಗ್ಗೆ ರಾಜ್ಯ ವಿದ್ಯುನ್ಮಾನ ಮಾಧ್ಯಮಗಳು ಸಹ ಸುದ್ದಿ ಭಿತ್ತರಿಸಿ ಸರಕಾರ ಮತ್ತು ಜಿಲ್ಲಾಡಳಿತದ ಗಮನ ಸೆಳೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎನ್‌.ಜಯರಾಮ್‌, ಬೆಳಗಾವಿ ಡಿಡಿಪಿಐ ಎ.ಬಿ.ಪುಂಡಲೀಕ ನೇತೃತ್ವದ ಅಧಿಕಾರಿಗಳ ತಂಡ ರಚಿಸಿ ತಪಾಸಣೆಗೆ ಸೂಚಿಸಿದ್ದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ತಪಾಸಣೆ ನಡೆಸಿದಾಗ ಆರ್ಯನ್ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಸುತ್ತಿರುವುದು, ಶಾಲೆಯಲ್ಲಿಯೇ ನಿಯಮ ಉಲ್ಲಂಘಿಸಿ ಸಮವಸ್ತ್ರ, ಪುಸ್ತಕ, ಬ್ಯಾಗ್ ಮಾರಾಟ ಮಾಡುತ್ತಿದ್ದ ಅಂಶಗಳು ಬಯಲಿಗೆ ಬಂದಿತ್ತು. ಡಿಡಿಪಿಐ ಪುಂಡಲೀಕ ಶಾಲಾ ಮಾನ್ಯತೆ ರದ್ಧತಿ ಆದೇಶ ಹೊರಡಿಸಿದರು. ಇನ್ನು ಕನ್ನಡ ಬೆಳೆಸಿ ಉಳಿಸಲು ಪಣ ತೊಟ್ಟ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಕನ್ನಡಪರ ಸಂಘಟನೆಗಳು ಅಭಿನಂದನೆ ವ್ಯಕ್ತಪಡಿಸಿದ್ದು, ನಿಯಮ ಉಲ್ಲಂಘಿಸಿದ ಆರ್ಯನ್ ಶಾಲೆಯ ಮುಖ್ಯಸ್ಥರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಮಾನ್ಯತೆ ಹಿಂಪಡೆದ ಶಾಲೆಯನ್ನು ಕೂಡಲೇ ಮುಚ್ಚಬೇಕು ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದು, ಶಾಲೆ ಮುಚ್ಚದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಸಹ ನೀಡಿದ್ದಾರೆ.

ಕೋಟ್… ಶಾಲೆಗೆ ಅನುಮತಿ ಹಾಗೂ ಮಾನ್ಯತೆ ನೀಡುವಾಗ ವಿಧಿಸಿದ ಷರತ್ತುಗಳನ್ನು ಪಾಲಿಸದೇ ಕರ್ನಾಟಕ ಶಿಕ್ಷಣ ಕಾಯ್ದೆ 1983, ಕರ್ನಾಟಕ ಆ್ಯಕ್ಟ್‌ 1995 ಸೆಕ್ಷನ್‌ 39 ಎ ಮತ್ತು ಎಫ್‌ ಕೆಳಗೆ ಮಾನ್ಯತೆಯನ್ನ ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. 
ಎನ್. ಜಯರಾಮ, ಜಿಲ್ಲಾಧಿಕಾರಿ.