SHARE

ಬೆಳಗಾವಿ: ಗೋಕಾಕನ ಹಣ ಮತ್ತು ತೋಳ್ಬಲ ಸಂಸ್ಕ್ರತಿಯ ರಾಜಕಾರಣ ಯಮಕನಮರಡಿ ಸೇರಿ ಇತರ ಕ್ಷೇತ್ರದಲ್ಲಿ ವಿಸ್ತರಿಸಬಾರದು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಉಲ್ಲೇಖಿಸಿ ತಿಳಿಸಿದರು. ಕಸಾಪ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ರಾಜಕೀಯ ವ್ಯವಸ್ಥೆ ಯಮಕನಮರಡಿಗೆ ಬರಬಾರದು ಎಂದು ಸ್ವತಃ ಕಾಂಗ್ರೆಸ್ ನಾಯಕ, ಮಾಜಿ ಸಚಿವರೇ ಹೇಳುತ್ತಿದ್ದಾರೆ ಎಂದು ಅಶೋಕ ಪೂಜಾರಿ ತಿಳಿಸಿದರು.

ಗೋಕಾಕದಲ್ಲಿ ತೋಳ್ಬಲ ಮತ್ತು ಹಣ ಬಲ ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮ ನಡಸಿ ಗೆದ್ದು ಬರುತ್ತಿದ್ದಾರೆ. ಚುನಾವಣಾ ಆಯೋಗ ಆಧಾರ್ ಸಂಖ್ಯೆಯನ್ನು voter ID ಜತೆಗೆ ಸೇರ್ಪಡೆ ಮಾಡಬೇಕು ಎಂಬ ಒತ್ತಾಯ ಮಾಡಿ ಜು. 20 ರಂದು ಸಾಂಕೇತಿಕ ಧರಣಿ ನಡಸಲಾಗುವುದು ಎಂದು ಘೋಷಿಸಿದರು. ಗೋಕಾಕದಿಂದ ಒಂದು ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಲಾಗುವುದು ಎಂದರು.

ಡಾ.ಎ.ವೈ ಪೋಗನವರ ಮಾತನಾಡಿ ಆಧಾರ್ ಲಿಂಕ್
ಮಾಡುವದರಿಂದ ಚುನಾವಣೆ ಅಕ್ರಮ ತಡೆಯಲು ಸಹಾಯಕವಾಗುತ್ತದೆ. ಹಣಬಲ ಮತ್ತು ತೊಳ್ಬಲದಿಂದ ಆಯ್ಕೆಯಾಗುತ್ತಿರುವ ವ್ಯಕ್ತಿಗಳನ್ನು ತಡೆಯಲು ಸಾಧ್ಯ ಆಗುತ್ತದೆ. ಭೂತಮಟ್ಟದ ಮತ ಎಣಿಕೆ ಮಾಡುವುದರಿಂದ ಜನರು ಒಂದು ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಭೂತ ಎಣಿಕೆ ಕೈ ಬಿಟ್ಟು ಹೊಸ ವ್ಯವಸ್ಥೆ ಮಾಡಬೇಕು. ನಮ್ಮ ಹೋರಾಟ ಪಕ್ಷಾತೀತವಾಗಿದೆ ಎಂದು ಹೇಳಿದರು.

ಮಾಜಿ ಜಿಪಂ. ಅಧ್ಯಕ್ಷ ಈರಣ್ಣಾ ಕಡಾಡಿ ಮಾತನಾಡಿ ಚುನಾವಣೆ ನಡೆಯುವ ಹಿಂದಿನ ದಿನದವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ಇರುವುದರಿಂದ ಪ್ರಭಾವಿ ವ್ಯಕ್ತಿಗಳು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದನ್ನು ಚುನಾವಣಾ ಆಯೋಗ ತಡೆಯಬೇಕು ಎಂದು ತಿಳಿಸಿದರು.
ಅರವಿಂದ ದಳವಾಯಿ, ಎಂ. ಟಿ. ಪಾಟೀಲ, ಈಶ್ವರ ಕಟ್ಟಿ, ಈರಣ್ಣಾ ಅಂಗಡಿ, ಎಂ.ಟಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.