SHARE

ಬೆಳಗಾವಿ: ಮಂಗಳವಾರ ಬೆಳಗಾವಿ ನಗರ ಸೇರಿ ಜಿಲ್ಲೆಯ ಇತರ ಭಾಗಗಳಲ್ಲಿ ಬೆಂಬಿಡದ ಕುಂಭದ್ರೋಣ ಮಳೆ ಸುರಿದಿದ್ದು, ಖಾನಾಪುರ ತಾಲೂಕಿನಲ್ಲಿ ಸುರಿದ ಮಳೆಗೆ ರಸ್ತೆ ಸಹಿತ ಸೇತುವೆ ಕಣಕುಂಬಿ ಬಳಿ ಕತ್ತರಿಸಿ ಹೋಗಿದೆ. ಖಾನಾಪುರ ತಾಲೂಕಿನಲ್ಲಿ 377.5 ಮಿಲಿಮೀಟರ್ ಮಳೆಯಾದರೆ ಬೆಳಗಾವಿ ತಾಲೂಕಿನಲ್ಲಿ 143.3 ಎಂದು ತಿಳಿಯಲಾಗಿದೆ. ಮಂಗಳವಾರ ಬೆಳಿಗ್ಗೆಯೇ ಪ್ರಾರಂಭವಾದ ಮಳೆ ಇಡೀ ದಿನ ಸುರಿದು ತಡರಾತ್ರಿಯೂ ಮುಂದುವರೆದಿತ್ತು. ಈ ವರ್ಷ ಮಳೆಗಾಲ ಪ್ರಾರಂಭವಾದರೂ ಬಿಸಿಲ ಬೇಗೆ, ಕುಡಿಯುವ ನೀರಿನ ಕೊರತೆ ಕಡಿಮೆಯಾಗಿರಲಿಲ್ಲ. ಮಂಗಳವಾರ ಸುರಿದ ಮಳೆ ಸಂಪೂರ್ಣ ತಂಪು ವಾತಾವರಣ ನೀಡುವಲ್ಲಿ ಸಫಲವಾಗಿದೆ. ಗೋವಾ ರಸ್ತೆಯ ಕಣಕುಂಬಿಯಿಂದ 5 ಕಿಮೀ ಅಂತರದ ಚಿಗುಲೆ ಮವುಲಿ ದೇವಸ್ಥಾನದ ಬಳಿ ಸೇತುವೆ ಸಹಿತ ರಸ್ತೆ ಕೊಚ್ಚಿ ಹೋಗಿ ಚಿಗುಲೆ- ಕಣಕುಂಬಿ ರಸ್ತೆ ಸಂಚಾರ ‘ಕಟ್’ ಆಗಿದ್ದು ಮಳೆಯ ತೀವೃತೆಯನ್ನು ತೋರಿಸಿದೆ. ಈ ಮಧ್ಯೆ ರಸ್ತೆಯಲ್ಲಿ ದಾಟಲೆತ್ನಿಸಿದ ಬೊಲೆರೋ ವಾಹನ ಕೊಚ್ಚಿ ಹೋಗಿದ್ದು ಒಬ್ಬನಿಗೆ ಗಾಯವಾಗಿದೆ.

ಕಳೆದ 12 ತಾಸಿನಲ್ಲಿ ಬರೋಬ್ಬರಿ 1.20 ಅಡಿಯಷ್ಟು ನೀರು ರಾಕಸಕೊಪ್ಪ ಜಲಾಶಯದ ಒಡಲು ಸೇರಿದೆ ಎಂದು ಅಧಿಕಾರಿಗಳು ಸ್ಪಷ್ಠಪಡಿಸಿದ್ದಾರೆ. ಮಂಗಳವಾರ ರಾತ್ರಿ 10 ರ ಸುಮಾರಿಗೆ ಮಳೆ ಆರ್ಭಟ ತನ್ನಗಾದಂತೆ ಕಂಡಿದ್ದು, ಶಾಸ್ರ್ತೀ ನಗರ, ಶಹಾಪುರ, ಖಾಸಭಾಗ, ಝುನ್ನೆ ಬೆಳಗಾವಿ, ಓಂಕಾರ ನಗರದ ಕೆಲ ಮನೆಗಳಿಗೆ ನೀರು ನುಗ್ಗಿದೆ.