SHARE

ಬೆಳಗಾವಿ: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ. ಕೆಳಹಂತದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಮಾಧ್ಯಮಗಳು ಹಾಗೂ ಜನಸಾಮಾನ್ಯರೊಂದಿಗೆ ಸಹಜ ಸೌಜನ್ಯ, ಸೌಮ್ಯತೆಯಿಂದ ಇದ್ದು, ತಮ್ಮ ಕಚೇರಿ ಬಾಗಿಲು ಸದಾ ಜನಭೇಟಿಗೆ ತೆರೆದಿಟ್ಟುಕೊಂಡಿದ್ದ ಎನ್. ಜಯರಾಮ ಜಿಲ್ಲೆಯನ್ನು ಸಮಯೋಚಿತ ಆಡಳಿತದಲ್ಲಿ ತೊಡಗಿಸಿ ಬೇಷ್ ಎನ್ನಿಸಿಕೊಂಡಿದ್ದರು.

ರಾಷ್ಟ್ರಪತಿ, ಪ್ರಧಾನಿಗಳ ಆಹ್ವಾನ; ಯಶಸ್ವಿ ವಿಧಾನಮಂಡಲ ಅಧಿವೇಶನ ನಡೆಸಿದ್ದು, ನಾಡವಿರೋಧಿ ಚಟುವಟಿಕೆಗಳನ್ನು ಹದ್ದು ಬಸ್ತಿನಲ್ಲಿಟ್ಟಿದ್ದು, ಸಭೆ, ಉತ್ಸವ, ಸಾರ್ವಜನಿಕ ಸಮಾರಂಭಗಳ ವ್ಯವಸ್ಥಿತ ಆಯೋಜನೆ ಸೇರಿ ಇಡೀ ಆಡಳಿತ ವ್ಯವಸ್ಥಿತವಾಗಿ ನಡೆಸಿ ಗಮನ ಸೆಳೆದಿದ್ದರು.