SHARE

ಬೆಳಗಾವಿ: “ವಿಶ್ವ ಜೈವಿಕ ಇಂಧನ ದಿನಾಚರಣೆ” ಕಾರ್ಯಕ್ರಮ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಧ್ಯಾಲಯದಲ್ಲಿ ಇಂದು ನಡೆಯಿತು. ಜನಸಾಮಾನ್ಯರಲ್ಲಿ ಜೈವಿಕ ಇಂಧನದ ಉಪಯೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಸಿಇಒ ಆರ್. ರಾಮಚಂದ್ರನ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಇಂಧನ ಕ್ಷೇತ್ರದಲ್ಲಿ ನಮ್ಮ ದೇಶ ಎದುರಿಸುತ್ತಿರುವ ಸಂಕಷ್ಟ ದಿಂದ ಪಾರಾಗಲು ಪರ್ಯಾಯವಾಗಿ ಜೈವಿಕ ಇಂಧನವನ್ನು ಬಳಸಬಹುದಾಗಿದೆ. ಅದು ಅನಿವಾರ್ಯ ಕೂಡ. ಇಂಧನದ ಮಿತವ್ಯಯ ಬಳಕೆ ಕೂಡಾ ಅತೀ ಮುಖ್ಯವಾಗಿದೆ” ಎಂದರು.
ಅರಣ್ಯವನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿತಾವಿ ಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ ವಿಟಿಯು “ರೈತರಿಗೆ, ಶಾಲೆ ಕಾಲೇಜು ಮಕ್ಕಳಿಗೆ, ಸಂಘ ಸಂಸ್ಥೆಗಳಿಗೆ ನಿರುದ್ಯೋಗ ಯುವಕ, ಯುವತಿಯರಿಗೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಜೈವಿಕ ಇಂಧನದ ಬಗ್ಗೆ ಮತ್ತು ಇತರೆ ಉಪಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಜ್ಞಾನ ಸಂಗಮ ಆವರಣದಲ್ಲಿ ಜೈವಿಕ ಇಂಧನ ಸಂಶೋದನಾ, ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಅದರೊಂದಿಗೆ ಸದರಿ ಕ್ಷೇತ್ರದಲ್ಲಿನ ಎಲ್ಲ ಸಹಭಾಗೀದಾರರಿಗೆ ವಿಷೇಶ ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಲು ಉದ್ದೇಶಿಸಿದ್ದೇವೆ” ಎಂದರು.

ವಿತಾವಿ ಹಣಕಾಸು ಅಧಿಕಾರಿ ಶ್ರೀಮತಿ ಎಂ. ಎ. ಸಪ್ನಾ,
ಡಿಸಿಎಫ್ ಅಶೋಕ ಪಾಟೀಲ, ಸಚೀನ್ ಹುಲಮನಿ ಇತರರು ಉಪಸ್ಥಿತರಿದ್ದರು. ವಿವಿಧ ಜೈವಿಕ ಇಂಧನ ಮರಗಳಾದ ಹೊಂಗೆ, ಬೇವು, ಹಿಪ್ಪೆ, ಸೀಮರುಬ ಮುಂತಾದ 150ಕ್ಕೂ ಹೆಚ್ಚು ಸಸಿಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.