SHARE

ತುಮಕೂರು: ತುಮಕೂರು ಎಪಿಎಂಸಿಯ 2016-17ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಪ್ರಾಂಗಣದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೆ.ಪಿ.ಸಿ.ಸಿ.ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್ ರವರು ಬಿಜೆಪಿಯವರಿಂದ ನಾವೇನು ಬುದ್ದಿ ಕಲಿಯಬೇಕಿಲ್ಲ. ಅಮಿತ್ ಶಾ ಅವರ ತಂತ್ರ-ಕುತಂತ್ರ ಕರ್ನಾಟಕದಲ್ಲಿ ನಡೆಯೋದಿಲ್ಲ ಅವರು ರಾಜ್ಯಕ್ಕೆ ಬಂದು ಚುನಾವಣೆ ಕಾರ್ಯತಂತ್ರ ರೂಪಿಸಿರಬಹುದು. ಆದರೆ ಅವರ ಕಾರ್ಯತಂತ್ರ ಇಲ್ಲಿ ನಡೆಯುವುದಿಲ್ಲ. ಇದೆನು ಬಿಹಾರ ಅಥವಾ ಉತ್ತರ ಪ್ರದೇಶವಲ್ಲ ಎಂದರು.

ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಗಳು ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಅವರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದರು.ನಾವು ಯಾವುದೇ ರೀತಿಯಲ್ಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವೂ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಮೀಕ್ಷೆಯನ್ನು ನಾವೇನು ದುಡ್ಡುಕೊಟ್ಟು ಮಾಡಿಸಿಲ್ಲ ಅಥವಾ ಮಾಡಿ ಎಂದು ಹೇಳಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ನಡೆ ಜನರ ಕಡೆ ಎಂಬ ಧ್ಯೇಯೋದ್ದೇಶದಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ಜನ ಮನ್ನಣೆ ನೀಡುತ್ತಿದ್ದಾರೆ ಎಂಬುದು ಸತ್ಯ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ, ಸಚಿವ ಟಿ.ಬಿ.ಜಯಚಂದ್ರ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗಂಗಾಧರಪ್ಪ ಮತ್ತಿತರರು ಉಪಸ್ಥಿತರಿದ್ದರು.