SHARE

ಬೆಳಗಾವಿ: ನಿನ್ನೆ ಅಥಣಿಯಲ್ಲಿ ನಡೆದ ಸರ್ಕಾರದ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಸಚಿವ ಅನಂತಕುಮಾರ ಅವರು ಮಾಜಿ ಪ್ರದಾನಿ ಎಚ್ ಡಿ ದೇವೆಗೌಡರನ್ನು ಉತ್ತರ ಕರ್ನಾಟಕದ ವಿರೋಧಿ ಎಂದದ್ದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಜಿಪಂ ಸದಸ್ಯಹಾಗೂ ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ ಲೇವಡಿ ಮಾಡಿದರು.

ಸಚಿವ ಅನಂತಕುಮಾರ ಹೇಳಿಕೆ ಖಂಡಿಸುವ ಕುರಿತು ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕಕ್ಕೆ ದೇವೆಗೌಡರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತು, ಕೃಷ್ಣೆ ಮೆಲ್ದಂಡೆ ಯೋಜನೆ, ಮಾರ್ಕಂಡೆಯ ನದಿಗೆ ಶಿರೂರು ಬಳಿ ಡ್ಯಾಂ, ಹತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಮಂಜೂರು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಬಿಜೆಪಿ ಉತ್ತರ ಕರ್ನಾಟಕಕ್ಕೆ ಏನು ಮಾಡಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಅವರು ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ಇಲ್ಲಿಯ ರೈತರು ಕಳಸಾ ಬಂಡೂರಿ ಹೋರಾಟ ಮಾಡುತ್ತಿದ್ದು, ಅದನ್ನು ಒಂದು ದಿನವೂ ಮೋದಿಯವರಿಗೆ ವಿವರಿಸಿ ನಮ್ಮ ಪಾಲಿನ ನೀರನ್ನು ಪಡೆಯಲು ಪ್ರದಾನಿಯವರನ್ನು ಒಪ್ಪಿಸಲಾಗದ ಬಿಜೆಪಿ ನಾಯಕರಿಗೆ ದೇವೆಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮಾಡಲಗಿ ಎಚ್ಚರಿಸಿದರು.

ಸಭೆಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷ ಪೈಜುಲ್ಲಾ ಮಾಡಿವಾಲೆ, ನಗರ ಅದ್ಯಕ್ಷ ಪ್ರಮೋದ ಪಾಟೀಲ, ಹಿರಿಯ ಮುಖಂಡರಾದ ಟಿ ಎನ್ ಪಠಾಣ, ಶಶಿಧರ ಚರಂತಿಮಠ, ಚನ್ನಪ್ಪ ವಗ್ಗನ್ನವರ, ಅಶೋಕ ಪಾಟೀಲ, ಶ್ರೀಶೈಲ ಫಡಗಲ್, ಸಂತೋಷ ಕುಕಡೊಳ್ಳಿ ಉಪಸ್ಥಿತರಿದ್ದರು.