SHARE

ಬೆಳಗಾವಿ: ಖ್ಯಾತ ಸಂಶೋಧಕ, ಇತಿಹಾಸಕಾರ, ಉಪಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ಹಂತಕರ ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆಗಳ ಅವಿರತ ಪ್ರಯತ್ನದ ನಡುವೆ ಬೆಳಗಾವಿ ಸಾಹಿತ್ಯ ವಲಯದಿಂದ ಆತಂಕ ವ್ಯಕ್ತವಾಗಿದೆ. ಡಾ. ಕಲಬುರಗಿ ಹತ್ಯೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಹಂತಕರ ಪತ್ತೆಯಾಗದಿರುವದಕ್ಕೆ ನಗರದಲ್ಲಿ ಸಭೆ ಸೇರಿದ್ದ ಬೆಳಗಾವಿಯ ಸಾಹಿತಿಗಳು ಹಾಗೂ ಚಿಂತಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಶೀಘ್ರವೇ ಹಂತಕರನ್ನು ಪತ್ತೆ ಹಚ್ಚಲು ಸರಕಾರ ಆದ್ಯತೆ ಮೇರೆಗೆ ಶ್ರಮಿಸಬೇಕೆಂದು ರಾಜ್ಯ ಸರಕಾರವನ್ನು ಇಂದು ಎರಡು ವರ್ಷ ತುಂಬಿದ ಬಳಿಕ ಮತ್ತೆ ಆಗ್ರಹಿಸಿದ್ದಾರೆ. ಬೆಳಗಾವಿಯ ರಾಮದೇವ ಹೊಟೆಲ್ ಬಳಿಯ ನೂತನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಸಂಜೆ ಸುದೀರ್ಘ ಸಭೆ ನಡೆಸಿ ತನಿಖೆ ವಿಳಂಬವಾಗುತ್ತಿರುವುದು ಹಾಗೂ ಹಂತಕರು ಪತ್ತೆಯಾಗದ ಬಗ್ಗೆ ಅಸಮಧಾನದ ವಿಸ್ಮಯ ವ್ಯಕ್ತವಾಯಿತು. ದೇಶದಲ್ಲಿ ಅರಾಜಕತೆ, ಅಸಹಿಷ್ಣುತೆ ಹೆಚ್ಚುತ್ತಿರುವ ಪರಿಣಾಮವಾಗಿಯೇ ವಿಚಾರವಾದಿಗಳಾದ ಗೋವಿಂದ ಪನ್ಸರೆ, ದಾಬೋಲ್ಕರ ಮತ್ತು ಕಲಬುರ್ಗಿ ಅವರ ಹತ್ಯೆಗಳಾಗಿವೆ ಎಂಬ ದಟ್ಟ ಅಭಿಪ್ರಾಯ ವ್ಯಕ್ತವಾಯಿತು. ಸಾಂಸ್ಕೃತಿಕ ಏರಿಳಿತ ಆಗಿರುವದರ ಪರಿಣಾಮಗಳನ್ನು ನಾವು ಇಂದು ಕಾಣುತ್ತಿದ್ದೇವೆ. ವೈಚಾರಿಕತೆ ಮತ್ತು ಅರಾಜಕತೆಯ ನಡುವಿನ ಸಂಘರ್ಷದಲ್ಲಿ ಅರಾಜಕತೆಯ ಕೈ ಮೇಲಾಗುತ್ತಿದೆ ಎಂದು ಸಭೆಯಲ್ಲಿ ಮಾತನಾಡಿದ ಚಿಂತಕರು ಕಳವಳ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ದಿವಂಗತ ಕಲಬುರ್ಗಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಡಾ.ಜ್ಯೋತಿ ಹೊಸೂರ, ನಿವೃತ್ತ ಪ್ರಾಚಾರ್ಯ ಬಸವರಾಜ ಜಗಜಂಪಿ, ಸಾಹಿತಿ ಸರಜೂ ಕಾಟಕರ, ಡಿ.ಎಸ್.ಚೌಗುಲೆ, ರಾಮಕೃಷ್ಣ ಮರಾಠೆ, ಬಿಎಸ್.ಗವಿಮಠ, ಡಿ.ಎಸ್.ಇಂಚಲ, ಪ್ರಕಾಶ, ಎಚ್.ಬಿ.ಕೋಲಕಾರ, ಜ್ಯೋತಿ ಬದಾಮಿ, ಅಶೋಕ ಚಂದರಗಿ, ಪ್ರೊ. ಚಂದ್ರಕಾಂತ ಪೋಕಳೆ ಮುಂತಾದವರು ಮಾತನಾಡಿದರು.