SHARE

ಬೆಳಗಾವಿ: ಉತ್ತರ ಕರ್ನಾಟಕ ಜನರನ್ನು ಪರಸ್ಪರ ಬೆಸೆಯುವ ಸಂಭ್ರಮದ ಹಬ್ಬ ಗಣೇಶೋತ್ಸವ ಎಂದು ರಾಜ್ಯ ಎಡಿಜಿಪಿ( ಆಡಳಿತ) ಕಮಲಪಂತ ಶೃದ್ಧಾಳುಗಳನ್ನು ಹುರಿದುಂಬಿಸಿದ್ದಾರೆ. ಗಣೇಶೋತ್ಸವದ ನಿಮಿತ್ತ ಜಿಲ್ಲೆಯ ಉಸ್ತುವಾರಿ ಆಗಮಿಸಿ ನಗರದ ಭಾರಿ ಗಣೇಶೋತ್ಸವ ಮತ್ತು ವಿಸರ್ಜನಾ ಮೆರವಣಿಗೆಯ ಪೂರ್ವ ತಯಾರಿಯ ಮಾಹಿತಿ ಸ್ಥಳೀಯ ಆಯುಕ್ತಾಲಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಪಡೆದ ಅವರು ತಮ್ಮನ್ನು ಎದುರಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಉತ್ತರ ಕರ್ನಾಟಕ ಭಾಗ ಅದರಲ್ಲೂ ಬೆಳಗಾವಿಗೆ ಹೆಚ್ಚಿನ ಪೋಲೀಸ್ ಭದ್ರತೆ ಒದಗಿಸಲಾಗಿದ್ದು ಶಾಂತ ಸೌಹಾರ್ಧತೆಯಿಂದ ಗಣೇಶೋತ್ಸವ ಮುಗಿಯಲು ಇಲಾಖೆ ಎಲ್ಲ ಕ್ರಮಗಳನ್ನು ವಹಿಸಿದೆ ಎಂದರು.

ಪೊಲೀಸ್ ಇಲಾಖೆ ಭಕ್ತಾದಿಗಳೊಂದಿಗೆ ಸಮ್ಮಿಳಿತವಾಗಿ ಹಬ್ಬ ಆಚರಿಸಿ ಬಂದೋಬಸ್ತ್ ಕಾರ್ಯ ನೆರವೇರಿಸಲಿದೆ. ಅಗತ್ಯಬಿದ್ದರೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಜತೆಗೆ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನೂ ಸಿದ್ಧವಿರಿಸಿಕೊಳ್ಳಲು ಸೂಚಿಸಲಾಗಿದೆ ಎಂದರು. ಬೆಳಗಾವಿ ಉತ್ತರವಲಯದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರೇಂಜ್ ಐಜಿ ಮಾರ್ಗದರ್ಶನದಲ್ಲಿ ಸೂಕ್ತ ಬಂದೋಬಸ್ತ್ ನೆರವೇರಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಸೂಕ್ತ ಮಾರ್ಗದರ್ಶನ ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದರು.

ಖ್ಯಾತ ವಿಚಾರವಾದಿ ಎಂ. ಎಂ. ಕಲಬುರಗಿ ಹಂತಕರು ಎರಡು ವರ್ಷ ಪತ್ತೆಯಾಗದ ಬಗ್ಗೆ ಕೇಳಿದ ಪ್ರಶ್ನೆಗೆ ಆ ವಿಷಯ ನನಗೆ ಗೊತ್ತಿಲ್ಲ ಜತೆಗೆ ನನ್ನ ಅಧಿಕಾರ ವ್ಯಾಪ್ತಿಗೆ ಬಾರದು ಎಂದು ತೆರೆ ಎಳೆದರು. ಕಮಿಷ್ನರ್ ಟಿ. ಜಿ. ಕೃಷ್ಣಭಟ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಪಿ ಸೀಮಾ ಲಾಟಕರ, ಅಮರನಾಥರೆಡ್ಡಿ, ಹೆಚ್ಚುವರಿ ಎಸ್ಪಿ ರವೀಂದ್ರ ಗಡಾದಿ, ಎಸಿಪಿ ಶಂಕರ ಮಾರಿಹಾಳ, ಗುರುಶಾಂತಪ್ಪ, ಸಿ. ಟಿ. ಜಯಕುಮಾರ ಉಪಸ್ಥಿತರಿದ್ದರು.