SHARE

ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ ನೀಡಿದ ನಾಡಿನ ವಿರುದ್ಧದ ಹೇಳಿಕೆ ಅವರಿಗೇ ಕಂಟಕವಾಗಿ ಪರಿಣಮಿಸಿದ್ದು, ಸ್ವತಃ ಕಾಂಗ್ರೆಸ್ ವರಿಷ್ಠರು ಲಕ್ಷ್ಮೀ ಬೆನ್ನುಗೆ ನಿಲ್ಲದೇ ಏಕಾಂಗಿಯಾಗಿಸಿದ್ದಾರೆ. ರಾಜಕೀಯವಾಗಿ ಲಕ್ಷ್ಮೀ ಹೆಬ್ಬಾಳಕರ ಅಂತ್ಯಕ್ಕೆ ಸ್ಕೆಚ್ ಹಾಕಿರುವ ವಿರೋಧಿ ಬಣಗಳು ಲಕ್ಷ್ಮೀ ನಾಡವಿರೋಧಿ ಹೇಳಿಕೆಯ ಆಗುಹೋಗುಗಳತ್ತ ನೆಟ್ಟ ನೋಟ ಇಟ್ಟಿದ್ದು, ಕೇಕೆ ಹಾಕಿದ್ದಾರೆ.

ಈ ಮಧ್ಯೆ ಕನ್ನಡಿಗರು ಹಾಗೂ ಪ್ರತಿಪಕ್ಷ ಬಿಜೆಪಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ದುಂಬಾಲು ಬಿದ್ದಿದ್ದು ರಾಜ್ಯಾದ್ಯಂತ ಅಸಮಧಾನ ಎಬ್ಬಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಹರಿಪ್ರಸಾದ ಸೇರಿ ಇತರ ಹಿರಿಯ ನಾಯಕರು ಸದರಿ ಬೆಳವಣಿಗೆಗಳ ಮಾಹಿತಿ ಆಕರಿಸಿದ್ದು, ಪರ- ವಿರೋಧ ಬಣಗಳು ವರಿಷ್ಠರಿಗೆ ಇನ್ನಿತರ ದೂರುಗಳನ್ನು ನೀಡಲು ಕತ್ತಿ ಮಸಿಯುತ್ತಿವೆ. ಗುರುವಾರ ಜಿಲ್ಲೆಯ ಕಾಂಗ್ರೆಸ್ ವಲಯ ಅತಿ ಹೆಚ್ಚಿನ ಚಟುವಟಿಕೆ ಮತ್ತು ಉತ್ಸಾಹದಿಂದ ಕಂಡುಬಂದಿದ್ದು ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಹತ್ತಾರು ದೂರು ಸಿದ್ಧಪಡಿಸುವ ಚಟುವಟಿಕೆಗಳು ಕಂಡುಬಂದವು.

ಲಕ್ಷ್ಮೀ ಹೆಬ್ಬಾಳಕರ ಅವರು ಕನ್ನಡ ನಾಡಿನ ವಿರುದ್ಧ ಹೇಳಿಕೆ ಕೊಟ್ಟರು ಎಂಬುವುದು ವಿಷಾದನೀಯ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸಹಜ ಮಜುಗುರವಾಗುತ್ತದೆ. ನಿಜವಾಗಿಯೂ ಪ್ರಮಾದವಾಗಿದ್ದು ಕಂಡುಬಂದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕನ್ನ ಸವಸುದ್ದಿ ಪ್ರತಿಕ್ರಿಯಿಸಿದ್ದಾರೆ. ಲಕ್ಷ್ಮೀ ಪರ ಬ್ಯಾಟಿಂಗ್ ಮಾಡಲು ಯತ್ನಿಸಿದ ಸಚಿವ ಡಿ. ಕೆ. ಶಿವಕುಮಾರ ಅವರನ್ನು ರಾಜ್ಯ ಉಸ್ತುವಾರಿ ಕೆ. ವೇಣುಗೋಪಾಲ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸ್ಥಿತಿಗತಿ ನಾನು ಚೆನ್ನಾಗಿ ಬಲ್ಲೆ. ಅಲ್ಲಿ ಪಕ್ಷ ಅಧೋಗತಿಗೆ ಇಳಿದಿದೆ. ಪರಸ್ಪರ ಸಹಕಾರದ ನಡೆ ಎಲ್ಲರೂ ಪ್ರದರ್ಶಿಸಬೇಕು. ನಾಡಿನ ಜನತೆಗೆ ನೋವಾಗುವಂತಹ ಬೇಜವಾಬ್ದಾರಿ ಹೇಳುಕೆ ನೀಡುವುದು ತರವಲ್ಲ. ವಿಷಯ ಗಂಭೀರವಾದ ಪರಿಗಣಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ವೇಣುಗೋಪಾಲ ಜಾಡಿಸಿರುವುದು ಬಹಿರಂಗವಾಗಿದೆ.