SHARE

ಬೆಳಗಾವಿ: ಬಹುನಿರೀಕ್ಷಿತ ಕೇಂದ್ರ ಸಂಪುಟ ವಿಸ್ತರಣೆಯೂ ಸಹ ನಡೆಯಲಿದ್ದು ಬೆಳಗಾವಿ ಸಂಸದ ಸುರೇಶ ಅಂಗಡಿ ಇಲ್ಲವೇ ಹುಬ್ಬಳ್ಳಿ ಸಂಸದ ಪ್ರಹ್ಲಾದ ಜೋಶಿ ಇಬ್ಬರಲ್ಲಿ ಒಬ್ಬರಿಗೆ ಕೇಂದ್ರ ರಾಜ್ಯ ಸಚಿವ ಸ್ಥಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದ್ದಾರೆ. ಇಲ್ಲಿಯವರೆಗೆ ಸಂಸದ ಸುರೇಶ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ನಡುವೆ ಇಬ್ಬರಲ್ಲಿ ಒಬ್ಬರಿಗೆ ಕೇಂದ್ರ ಮಂತ್ರಿ ಸ್ಥಾನ ಲಭಿಸುವ ಚರ್ಚೆ ಗರಿಗೆದರಿದ್ದ ಮಧ್ಯೆಯೇ ಈಗ ಬೆಳಗಾವಿ ಮತ್ತು ಹುಬ್ಬಳ್ಳಿ ನಡುವೆ ಈ ಪೈಪೋಟಿ ಉಂಟಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಸಂಸದ ಪ್ರಹ್ಲಾದ ಜೋಶಿ ಹಾಗೂ ಮೂರನೇ ಬಾರಿ ಎಂಪಿ ಆಗಿ ಆಯ್ಕೆ ಆಗಿರುವ ಬೆಳಗಾವಿಯ ಸಂಸದ ಸುರೇಶ ಅಂಗಡಿ ಇಬ್ಬರಲ್ಲಿ ಒಬ್ಬರಿಗೆ ಬಹುತೇಕ ಶನಿವಾರ ನಡೆಯುವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಲಭಿಸುವುದು ಮೂಲಗಳಿಂದ ಧೃಡಪಟ್ಟಿದೆ.