SHARE

ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಿಗೆ ಬೆಳಗಾವಿಯ ಸಾಹಿತ್ಯ ಹಾಗೂ ಸಾಮಾಜಿಕ ವಲಯ ತೀವೃ ಅಸಮಧಾನ ವ್ಯಕ್ತಪಡಿಸಿದೆ.ಇಂದು ಸಂಜೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಖಂಡನಾ ಹಾಗೂ ಸಂತಾಪ ಸೂಚಕ ಸಭೆಯಲ್ಲಿ ಬೆಳಗಾವಿಯ ಎಲ್ಲ ಸಂಘಟನೆಗಳು, ಹಿರಿಯರು ಭಾಗವಹಿಸಿದರು. ಪತ್ರಕರ್ತೆಯ ಹತ್ಯೆ ಖಂಡಿಸಿ ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಸಾಂಕೇತಿಕ ಧರಣಿ ಮತ್ತು ರ್ಯಾಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.ನಿವೃತ್ತ ಪ್ರಚಾರ್ಯ ಬಸವರಾಜ ಜಗಜಂಪಿ ಮಾತನಾಡಿ ಇಂದು ಅಸಹಿಷ್ಣುತೆ ಮತ್ತು ದುಷ್ಟಕೂಟದ ಚಟುವಟಿಕೆಗಳು ಮಿತಿಮೀರಿದೆ. ತಮಗಾಗದ ವಿಚಾರವಾದಿಗಳನ್ನು ಹತ್ಯೆ ಮಾಡುವಂತಹ ನೀಚ ಕೃತ್ಯಕ್ಕೆ ಇಂದಿನ ವ್ಯವಸ್ಥೆ ಇಳಿದಿರುವುದು ಆತಂಕದ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ಮಾತನಾಡಿ ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ ಹಾಗೂ ಕಲಬುರ್ಗಿ ಹತ್ಯೆಕೋರರನ್ನು ನಮ್ಮ ತನಿಖಾ ಸಂಸ್ಥೆಗಳಿಗೆ ಇನ್ನೂ ಪತ್ತೆ ಹಚ್ಚಲು ಆಗಿಲ್ಲ. ನೆರೆಯ ಸ್ಕಾಟ್ಲೆಂಡ್ ಪೊಲೀಸರಿಗಾದರೂ ತನಿಖೆ ಕೊಡಿ ಎಂದು ವ್ಯಂಗ್ಯವಾಗಿ ಅಸಮಧಾನ ವ್ಯಕ್ತಪಡಿಸಿದರು. ಗೌರಿ ಹತ್ಯೆ ಪ್ರಕರಣ ಸಿಬಿಐಗೆ ತತಕ್ಷಣ ವಹಿಸಬೇಕು ಎಂದು ಒತ್ತಾಯಿಸಿದರು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ ವಿಚಾರಗಳನ್ನು ಯಾರಿಗೂ ತಡೆಹಿಡಿಯಲಾಗದ ಹತಾಶೆಯಿಂದ ಈ ರೀತಿಯ ಹತ್ಯೆ ನಡೆಯುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಅದರದೆ ಪರಮಾಧಿಕಾರ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲು ವ್ಯಕ್ತಿಯ ಪರಮಾಧಿಕಾರಿ ಕಸಿದುಕೊಳ್ಳುವ ದಬ್ಬಾಳಿಕೆ ಪ್ರವೃತ್ತಿ ಖಂಡನೀಯ ಎಂದರು.

ಭ್ರಷ್ಟಾಚಾರ ನಿರ್ಮೂಲನ ಪರಿವಾರ, ಬೆಳಗಾವಿ ಯೂಥ ಪೌಂಡೇಶನ್, ಕ.ರ.ವೇ, ಬೆಳಗಾವಿ ಶೇತಕರಿ ಸಂಘಟನೆ, ಬಿ. ಆರ್. ಅಂಬೇಡ್ಕರ್ ಯುವ ಮಂಚ್, ಜೆಡಿಎಸ್ ಪಕ್ಷ, ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ ಇನ್ನಿತರ ಸಂಘಟನೆಗಳು ಭಾಗವಹಿಸಿದ್ದವು. ಅಡ್ವೊಕೇಟ್ ಹರತಷವರ್ಧನ ಪಾಟೀಲ, ಶ್ರೀನುವಾಸ ರಾವ್, ಸಂತೋಷ ಕಾಂಬಳೆ, ಪ್ರಮೋದಾ ಹಜಾರೆ, ಸಮಾಜಿಕ ಕಾರ್ಯಕರ್ತ ಸಾಜಿದ್ ಸಯ್ಯದ್, ಅಕ್ತರ್ ಸಣದಿ ಇತರರು ಭಾಗವಹಿಸಿದ್ದರು.