SHARE

ಬೆಳಗಾವಿ: ನಗರದ ಕೆಎಲ್‍ಇ ವಿಶ್ವವಿದ್ಯಾಲಯಕ್ಕೆ ಎಂಎಚ್‍ಆರ್‍ಡಿ ಸ್ವಚ್ಛತಾ ಪ್ರಶಸ್ತಿ ಲಭಿಸಿದೆ. ಸುಂದರ ಮತ್ತು ಸುಸಜ್ಜಿತ ಅತ್ಯಾಧುನಿಕ ಕ್ಯಾಂಪಸ್ ಹೊಂದಿರುವ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್‍ಇಐ) ಸ್ವಚ್ಛತಾ ರ್ಯಾಂಕಿಂಗ್ ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು (ಎಂಎಚ್‍ಆರ್‍ಡಿ) ನೀಡುವ ಪ್ರಶಸ್ತಿಯನ್ನು ಬೆಳಗಾವಿಯ ಕೆಎಲ್‍ಇ ಸಂಸ್ಥೆ ತನ್ನದಾಗಿಸಿಕೊಂಡಿದೆ.KLE University Belagavi ಸ್ವಚ್ಛತಾ ರ್ಯಾಂಕಿಂಗ್ ಪಟ್ಟಿಯ ವಿಶ್ವವಿದ್ಯಾಲಯ ವಿಭಾಗದಲ್ಲಿ ದೇಶದ ಐದು ವಿವಿಗಳು ಸ್ಥಾನ ಪಡೆದಿದ್ದು. ಕೆಎಲ್‍ಇ ವಿಶ್ವವಿದ್ಯಾಲಯಕ್ಕೆ 4ನೇ ಸ್ಥಾನ ಲಭಿಸಿದೆ. ಇದು ದಕ್ಷಿಣ ಭಾರತದಲ್ಲಿ ಪ್ರಥಮ ಎಂದು ಹೊರಹೊಮ್ಮಿದೆ. ಎಂಎಚ್‍ಆರ್‍ಡಿ ಆಹ್ವಾನದ ಮೇರೆಗೆ ದೇಶದ 3,500 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಯುಜಿಸಿ ಮತ್ತು ಎಐಸಿಟಿಇ ತಜ್ಞರ ಸಮಿತಿ 174 ಅಗ್ರ ಸಂಸ್ಥೆಗಳನ್ನು ಅಂತಿಮಗೊಳಿಸಿ, ಇದರಲ್ಲಿ ವಿಶ್ವವಿದ್ಯಾಲಯ, ತಾಂತ್ರಿಕ ಸಂಸ್ಥೆ, ಕಾಲೇಜು ಮತ್ತು ಸರ್ಕಾರಿ ಸಂಸ್ಥೆಗಳ ವಿಭಾಗಗಳಲ್ಲಿ ಒಟ್ಟಾರೆ 25 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಕೆಎಲ್‍ಇ ವಿಶ್ವವಿದ್ಯಾಲಯ ಪ್ರಮುಖ ಘಟ್ಟದಲ್ಲಿ ರ್ಯಾಂಕ್ ಪಡೆದಿರುವುದು ಗಮನ ಸೆಳೆದಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೆಕರ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ವಿದ್ಯಾರ್ಥಿಗಳು ಸ್ವಚ್ಛತೆಯ ರಾಯಭಾರಿಗಳಾಗಿದ್ದು, ಜನರು ಹಾಗೂ ಸಂಸ್ಥೆಗಳ ಸಹಕಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಮಿಷನ್ ಕನಸು ಮುಂದುವರಿಸಲಾಗುವುದು. ಎಚ್‍ಇಐಗಳನ್ನು ಸ್ಮಾರ್ಟ್ ಕ್ಯಾಂಪಸ್ ಆಗಿ ರೂಪಿಸುವುದರ ಜತೆಗೆ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ಈ ದೃಷ್ಟಿಯಿಂದ ಕೆಎಲ್‍ಇ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸ್ವಚ್ಚತೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಕೇಂದ್ರ ಸರಕಾರವು ವಿನೂತನ ಪ್ರಯೋಗಗಳನ್ನು ಮಾಡುತ್ತಿದ್ದು, ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡುತ್ತಿದೆ. ಆವರಣಗಳಲ್ಲಿ ಸಂಪೂರ್ಣವಾಗಿ ವಾಹನ, ತಂಬಾಕು ಉತ್ಪನ್ನ, ಮೊಬೈಲ್ ಸೇರಿದಂತೆ ಪರಿಸರಕ್ಕೆ ಮಾರಕವಾಗುವ ಪರಿಕರಗಳನ್ನು ನಿಷೇಧಿಸಲಾಗಿದೆ. ಸ್ವಚ್ಚತೆ ಕುರಿತು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿಕೊಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೆಎಲ್‍ಇ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ.ರ್ಯಾಂಕಿಂಗ್: ವಿದ್ಯಾರ್ಥಿಗಳು ಶೌಚಗೃಹದ ಸರಾಸರಿ, ಅಡುಗೆ ಕೋಣೆ ಸ್ವಚ್ಛತೆ, ಹರಿಯುವ ನೀರಿನ ಲಭ್ಯತೆ, ಶೌಚಗೃಹ ಮತ್ತು ಅಡುಗೆ ಕೋಣೆಯಲ್ಲಿ ಆಧುನಿಕ ವಸ್ತುಗಳು, ಕ್ಯಾಂಪಸ್‍ನಲ್ಲಿನ ಹಸಿರಿನ ಪ್ರಮಾಣ, ವಸತಿಗೃಹ ಮತ್ತು ಶೈಕ್ಷಣಿಕ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಅನುಸರಿಸಲಾಗುತ್ತಿರುವ ತಂತ್ರ, ನೀರು ಪೂರೈಕೆ ವ್ಯವಸ್ಥೆ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ತೊಡಗಿಸಿಕೊಂಡಿರುವುದನ್ನು ಆಧರಿಸಿ ರ್ಯಾಂಕಿಂಗ್ ಪಡೆದಿದೆ ಎಂದರು.