SHARE

ಬೆಳಗಾವಿ: ಮಳೆಗಾಲದಲ್ಲಿ ಅಷ್ಟೇನೂ ಪ್ರಾಬ್ಲಂ ಇಲ್ಲ. ಡಿಸೆಂಬರ್ ಅಂತ್ಯಕ್ಕೆ ಬಿಸಿಲು ಹೆಚ್ಚುತ್ತಿದ್ದಂತೆ ನಮಗಂತೂ ಸಿಕ್ಕಾಪಟ್ಟೇ ಅವಘಡದ ಫೋನ್ ಕರೆಗಳು ಬರುತ್ತವೆ. ನಾವೇನು ಮಾಡುವುದು…!? ಹೀಗೆ ಆತಂಕಕ್ಕೆ ಒಳಗಾಗಿದ್ದು ಅಗ್ನಿಶಾಮಕ ಅಧಿಕಾರಿಗಳು. ನಗರದ ಖಾನಾಪುರ ರಸ್ತೆಯ ಅಗ್ನಿಶಾಮಕ ಠಾಣೆಯಿಂದ ‘ನೀರಿನ ಟ್ಯಾಂಕರ್’ ತುರ್ತು ಕರೆಗೆ ಹೊರಬರಲು ಸಾಧ್ಯವಿಲ್ಲವಾಗುವ ಆತಂಕ ಎದುರಾಗಿದೆ. ಕನಿಷ್ಠ ಒಂದು ವರ್ಷ ಬ್ರಿಡ್ಜ್ ಕಾಮಗಾರಿ ಕೆಲಸ ಹಿಡಿದರೂ ಅಗ್ನಿಶಾಮಕ ವಾಹನಗಳಿಗೆ ತೊಂದರೆಯಾಗಲಿದೆ. ನಿಯಮಗಳ ಪ್ರಕಾರ ಅಗ್ನಿಶಾಮಕ ವಾಹನವನ್ನು ಬೇರೆಡೆ ಸಿದ್ಧತೆಯಿಂದ ಪಾರ್ಕ್ ಮಾಡಲು ಸಾಧ್ಯವಿಲ್ಲ ಎಂದು ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಶಿವಕುಮಾರ ತಿಳಿಸಿದ್ದಾರೆ.

ನಗರದಲ್ಲಿ ತುರ್ತಾಗಿ ಇನ್ನೊಂದು ಅಗ್ನಿಶಾಮಕ ಠಾಣೆ ಮಾಡಬೇಕಿದೆ. ಕನಿಷ್ಠ ನಮಗೆ 2 ಎಕರೆ ಜಾಗ ಬೇಕು. ಹೊಗಲಿ ಒಂದು ಎಕರೆ ಜಾಗವಾದರೂ ಕೊಡಿ ಎಂದು ಪಾಲಿಕೆ ಮತ್ತು ಬುಡಾ ಕಮಿಷ್ನರ್ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಈ ಬಗ್ಗೆ ಪಾಲಿಕೆ ಇಲ್ಲವೇ ಬುಡಾ ವತಿಯಿಂದ ಆಶಾದಾಯಕ ಪ್ರಗತಿ ಆಗಿಲ್ಲ ಎಂದು ಶಿವಕುಮಾರ ತಿಳಿಸಿದರು. ನಮಗೆ ನಗರದಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಮಾಡಲು ತುರ್ತಾಗಿ ಜಾಗದ ಅವಶ್ಯಕತೆ ಇದೆ ತುರ್ತಾಗಿ ಪಾಲಿಕೆ ಎಲ್ಲಾದರೂ ಜಾಗ ಕೊಡಲಿ ಎಂದು ಶಿವಕುಮಾರ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಬ್ರಿಡ್ಜ್ ಕಾಮಗಾರಿ ನಡೆಯುವುದರಿಂದ, ಸರಕಾರಕ್ಕೆ ಮನವಿ ಮಾಡಿಕೊಂಡು ತಾತ್ಕಾಲಿಕ ಅಗ್ನಿಶಾಮಕ ಠಾಣೆ ಆ ಭಾಗದಲ್ಲಿ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು ಎಂದು ಶಿವಕುಮಾರ ತಿಳಿಸಿದರು.