SHARE

ಬೆಳಗಾವಿ: ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೃಷ್ಠಿಸಿ ಕಲ್ಪಿಸಲು ಕಾಂಗ್ರೆಸ್ ನಾಯಕರು ಚಿಂತಿಸಿದ್ದು, ದಸರಾ ನಂತರ ಚಿಕ್ಕೋಡಿಗೆ ಜಿಲ್ಲಾಧ್ಯಕ್ಷರು ಪಕ್ಷದ ಉಸ್ತುವಾರಿ ನೋಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ವಿಜಯಕುಮಾರ ಮುಕುಂದ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೆಸರು ಈ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದು, ಮಂಜುಳಾ ಮುಕುಂದ ಬಹುತೇಕ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಆಗುವುದರ ಬಗ್ಗೆ ಪಕ್ಷದ ಉನ್ನತ ಮೂಲಗಳು ಸ್ಪಷ್ಠಪಡಿಸಿವೆ. ಪಕ್ಷ ಸಂಘಟನೆ ಅದರಲ್ಲೂ ಮಹಿಳೆಯರನ್ನು ಒಗ್ಗೂಡಿಸುವ ಶಕ್ತಿಯುಳ್ಳ ಶೇಡಬಾಳ ಮೂಲದ ಮಂಜುಳಾ ಮುಕುಂದ ಎಐಸಿಸಿ ಮತ್ತು ಕೆಪಿಸಿಸಿಯಲ್ಲಿ ಸ್ವತಃ ಇಮೇಜ್ ಹೊಂದಿದ್ದು, ಲಕ್ಷ್ಮಣರಾವ್ ಚಿಂಗಳೆ ಸಹ ಉನ್ನತ ನಾಯಕರ ಆಪ್ತವಲಯದಲ್ಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮತ್ತು ಇತರ ನಾಯಕರು ಈಗಾಗಲೇ ಚಿಕ್ಕೋಡಿಯನ್ನು ಪ್ರತ್ಯೇಕ ರಾಜಕೀಯ ಜಿಲ್ಲೆಯಾಗಿ ಮಾರ್ಪಡಿಸಿಕೊಂಡು ಕಾಂಗ್ರೆಸ್ ತಳಹದಿ ಆ ಭಾಗದಲ್ಲಿ ಗಟ್ಟಿಗೊಳಿಸಲು ಮನಸ್ಸು ಮಾಡಿರುವುದು ಬೆಳಕಿಗೆ ಬಂದಿದೆ. 18 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಒಡೆದು ಪ್ರತ್ಯೇಕ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕ ಸ್ಥಾಪಿಸುವುದು ಈಗ ಉನ್ನತ ನಾಯಕತ್ವದ ನಿರ್ಧಾರವಾಗಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಗೆ ಸುಮಾರು 9 ವಿಧಾನಸಭಾ ಹಾಗೂ ಒಂದು ಲೋಕಸಭಾ ಸ್ಥಾನ ಬರುತ್ತದೆ. ಚಿಕ್ಕೋಡಿ ಭಾಗದಲ್ಲಿ ಸಂಘಟನಾ ಚತುರ ಮತ್ತು ಪ್ರಾಮಾಣಿಕ ವ್ಯಕ್ತಿಯನ್ನು ಮೊದಲ ಅಧ್ಯಕ್ಷರಾಗಿ ಮಾಡುವ ಹಾದಿಯಲ್ಲಿ ಮಂಜುಳಾ ಮುಕುಂದ ಹೆಸರು ಮುಂಚೂಣಿಯಲ್ಲಿರುವ ಬಗ್ಗೆ ಪಕ್ಷದ ಮೂಲಗಳು ಸ್ಪಷ್ಠಪಡಿಸಿವೆ. ಆಸ್ಕರ್ ಫರ್ನಾಂಡಿಸ್ ಹೈಕಮಾಂಡ್ ಜತೆ ಚರ್ಚಿಸಿ ಅಧ್ಯಕ್ಷರೊಬ್ಬರ ಆಯ್ಕೆ ಮಾಡುವ ಉಲ್ಲೇಖ ವ್ಯಕ್ತಪಡಿಸಿದ್ದಾರೆ.