SHARE

ಬೆಳಗಾವಿ: ಸಿಟಿಜನ್ ಕೌನ್ಸಿಲ್ ಮತ್ತು ವಿವಿಧ ಸಂಘಟನೆಗಳು ಪರ್ಯಾಯ ಮಾರ್ಗ ರಚಿಸಿ ಕೊಟ್ಟು, ಆ ನಂತರವೇ ಬ್ರಿಡ್ಜ್ ಸಂಚಾರ ಬಂದ್ ಮಾಡಿ ಎಂಬ ಒತ್ತಾಯಕ್ಕೆ ಜಿಲ್ಲಾಡಳಿತ ಮಣಿದಿದ್ದು ರೈಲ್ವೇ ಓವರ್ ಬ್ರಿಡ್ಜ್ ಸಂಚಾರ ಇಂದು ಮತ್ತೆ ಪ್ರಾರಂಭವಾಗಿದೆ. ಕಳೆದ ನಾಲ್ಕುದಿನ ಟ್ರೈಯಲ್ ಗಾಗಿ ಸಂಚಾರವನ್ನು ಈ ಸೇತುವೆ ಮೇಲೆ ಬಂದ್ ಮಾಡುತ್ತಿದ್ದಂತೆ ಸಾರ್ವಜನಿಕರಿಗೆ ನಗರದ ಸಂಪರ್ಕ ಪಡೆಯುವುದು ದುಸ್ಸಾಹಸದ ಕೆಲಸವಾಗಿತ್ತು.

ನೂತನ ಸೇತುವೆ ನಿರ್ಮಿಸಿ ಆದರೆ ಪರ್ಯಾಯ ಚಾಲನಾ ಮಾರ್ಗ ಸರಳವಾಗಿ ಮಾಡಿಕೊಡಿ ಎಂಬ ಕೂಗು ಎಬ್ಬಿಸಲಾಯಿತು. ಸಂಸದ ಸುರೇಶ ಅಂಗಡಿ ಅಕ್ಟೋಬರ್ 3 ರಿಂದ ಕಾಮಗಾರಿ ಪ್ರಾರಂಭಕ್ಕೆ ಹುಕುಂ ಕೊಟ್ಟಿದ್ದರೂ ಸಹ ಸದ್ಯದ ಗತಿ ಸೇತುವೆ ಕಾಮಗಾರಿ ಮುಂದೂಡುವ ಸೂಚನೆ ನೀಡಿದೆ. ಸೇತುವೆ ಕಾಮಗಾರಿಗೆ ಕೆಲವಡೆ ವಿರೋಧ ಇದೆ ಎನ್ನಲಾಗುತ್ತಿದ್ದರೆ ಇತ್ತ ಸೇತುವೆ ಮೇಲೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ಪರ್ಧೇ ಸಹ ನಡೆದಿದೆ ಎಂಬ ಚರ್ಚೆ ಈಗ ಪ್ರಸ್ತುತ. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಸೇತುವೆ ಪರಿಶೀಲನೆ ನಡೆಸಿದ್ದು ಇಂದು ಮತ್ತೆ ಸಂಚಾರಕ್ಕೆ ತೆರೆದುಕೊಂಡಿದೆ.

ಬ್ರಿಟೀಷ್ ನಿರ್ಮಿತ ಐತಿಹಾಸಿಕ ಸೇತುವೆ ಕಣ್ಮರೆಯಾಗುವ ಭಾವನಾತ್ಮಕ ಅಳುಕಿನ ಮಧ್ಯೆ ತಿಕ್ಕಾಟದಲ್ಲಿ ಮತ್ತಷ್ಟು ದಿನ ಉಳಿಯಲಿದೆ. ಹೊಸ ಸೇತುವೆ ನಿರ್ಮಾಣ ಕಾಮಗಾರಿ ಎಂದು ಪ್ರಾರಂಭವಾಗುವುದು, ಅದಕ್ಕಾಗಿ ಬಂದ ಕೇಂದ್ರ ಅನುದಾನದ ಗತಿ ಏನು? ಇನ್ನೆಷ್ಟು ದಿನಕ್ಕೆ ಈ ಹೊಯ್ದಾಟ ನಡೆಯುವುದು ಎಂಬ ತರ್ಕ ಈಗ ಜನತೆಗೆ ಸಿಗುತ್ತಿಲ್ಲ.