SHARE

ಬೆಳಗಾವಿ: 1924ರಲ್ಲಿ ಮಹಾತ್ಮಾ ಗಾಂಧೀಜಿ ಮೊಟ್ಟ ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಅಧೀವೇಶನದ ಸ್ಥಳವಾಗಿರುವ ಇಲ್ಲಿನ ಕಾಂಗ್ರೆಸ್ ರಸ್ತೆಯ ವೀರಸೌಧದಲ್ಲಿ ಅದ್ಧೂರಿ ಗಾಂಧೀಜಿ ಜಯಂತಿ ಇಂದು ಆಚರಿಸಲಾಯಿತು.ಜಿಲ್ಲಾಡಳಿತ, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಇತರ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಗಾಂಧಿ ತಂಗಿದ್ದ ಸ್ಥಳದಲ್ಲಿ ಭಜನೆ, ಕೀರ್ತನೆ ಮತ್ತು ಗಾಂಧೀಜಿ ಜನ್ಮದಿನದ ಕುರಿತು ಉಪನ್ಯಾಸ, ಗಾಂಧೀಜಿ ಜೀವನ ಚರಿತ್ರೆ ಬಿಂಬಿಸುವ ಹೊತ್ತಗೆ ಬಿಡುಗಡೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪುಟಾಣಿಗಳು ಮಹಾತ್ಮಾ ಗಾಂಧಿಜೀ, ಮಾಜಿ ಪ್ರಧಾನಿ ಶಾಸ್ತ್ರೀಜಿ, ಹಿಂದೂ- ಮುಸ್ಲಿಂ, ಬೌದ್ಧ, ಕ್ರೀಶ್ಚಿಯನ್, ಸಿಖ್, ಜೋರಾಷ್ಟ್ರಿಯನ್ ಸೇರಿದಂತೆ ಹಲವು ಧರ್ಮಗಳ ಪ್ರತಿನಿಧಿಗಳ ವೇಷ ಭೂಷಣ ತೊಟ್ಟು ಪ್ರಾರ್ಥನೆ ಸಲ್ಲಿಸಿದರು. ಗಾಂಧೀಜಿಗೆ ಪ್ರಿಯವಾದ …ರಘುಪತಿ ರಾಘವ ರಾಜಾರಾಮ… ಸೇರಿದಂತೆ ಅನೇಕ ರಾಷ್ಟ್ರ ಭಕ್ತಿಯ ಭಜನೆ ಮತ್ತು ಹಿನ್ನೆಲೆ ಸಂಗೀತ ಪವಿತ್ರ ವೀರಸೌಧದ ಪಡಸಾಲೆಯಲ್ಲಿ ರಣರಣಿಸಿತು.ವೀರಸೌಧದ ಆವರಣದಲ್ಲಿ ಐತಿಹಾಸಿಕ ‘ಕಾಂಗ್ರೆಸ್ ಬಾವಿ’ ಇದ್ದು ಉದ್ಯಾನ ಮತ್ತು ಬಾವಿಯನ್ನು ಶೃಂಗರಿಸಲಾಗಿತ್ತು. ಮಕ್ಕಳು ಮತ್ತು ಜನತೆ ಉದ್ಯಾನದಲ್ಲಿ ಫೋಟೋ ಸೆಷನ್ ನಡೆಸಿದರು. ವಾರ್ತಾ ಇಲಾಖೆ ಹೊರತಂದ ಗಾಂಧಿ ಚರಿತ್ರೆ ಪುಸ್ತಕವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಕಮಿಷ್ನರ್ ಶಶಿಧರ ಕುರೇರ, ಮೇಯರ್ ಸಂಜೋತಾ ಬಾಂದೇಕರ, ಎಸಿ ಡಾ. ಕವಿತಾ ಯೋಗಪ್ಪನವರ ಉದ್ಘಾಟಿಸಿದರು. ಜಿಲ್ಲೆಯ ಎಲ್ಲ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.