SHARE

ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಧ್ಯಾವತಿ ಭಜಂತ್ರಿ ಅವರ ವರ್ಗಾವಣೆ ರದ್ದುಗೊಳಿಸಿ ಬೆಳಗಾವಿಯಲ್ಲಿಯೇ ಮುಂದುವರೆಸುವಂತೆ ಬೆಳಗಾವಿ ಜಿಲ್ಲಾ ಕಲಾವಿದರ ಒಕ್ಕೂಟ ಇಂದು ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮನವಿಗೆ ಸ್ಪಂದಿಸಿ ವಿಧ್ಯಾವತಿ ಅವರನ್ನು ಬೆಳಗಾವಿಯಲ್ಲಿಯೇ ಮುಂದುವರೆಸುವಂತೆ ಸಚಿವೆ ಉಮಾಶ್ರೀ ಅವರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಆದರೂ ಗಮನಿಸದ ಸಚಿವೆ ಉಮಾಶ್ರೀ ಬೆಳಗಾವಿಗೆ ಕರ್ತವ್ಯಲೋಪದಿಂದ ಅಮಾನತುಗೊಂಡಿದ್ದ ಎಸ್. ಐ. ಕರಿಶಂಕರಿ ಎಂಬ ಅಧಿಕಾರಿಯನ್ನು ನಿಯೋಜಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಕಲಾವಿದರು ಆರೋಪಿಸಿದರು.ಮನವಿ ಸ್ವೀಕರಿಸಿದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ವಿಜಯಮಹಾಂತೇಷ ಬೀಳಗಿ ಪ್ರತಿಕ್ರಿಯಿಸಿ ಮನವಿಯನ್ನು ಕೂಡಲೇ ಸರಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಕಲಾವಿದರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರಾಮಾಣಿಕ ಕರ್ತವ್ಯ ಮತ್ತು ಕಲಾವಿದರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ವಿಧ್ಯಾವತಿ ಅವರ ಯಾದಗಿರಿ ವರ್ಗಾವಣೆಯನ್ನು ರದ್ದುಗೊಳಿಸಿ ಇನ್ನೂ ಕೆಲಕಾಲ ಬೆಳಗಾವಿಯಲ್ಲೇ ಮುಂದುವರೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸುರೇಶ ವಾಗ್ಮೋಡೆ, ರಮೇಶ ಸಣದಿ, ಮಹಾದೇವಿ ಅವರಾಧಿ, ನಾಗವ್ವ ನಾಗನ್ನವರ, ರಾಘವೇಂದ್ರ ಲಂಬುಗೋಳ, ಶಿವಪ್ಪ ಬಳೋಬಾಳ, ಶ್ರೀಶೈಲ್ ಚೌಗುಲೆ, ಪಾರ್ವತಿ ಮಾಂಗ್, ಇಂದುಬಾಯಿ ಉಗಾರೆ, ಹಕ್ಕವ್ವ ಅವರಾದಿ, ಕೇದಾರಿ ಜಾಧವ, ಭರಮಪ್ಪ ಯರಗಟ್ಟಿ, ಸಿದ್ದಪ್ಪ ಬಡಿಗೇಡ, ರೇವಣ್ಣ ಕರಜಗಿ, ಸದಾಶಿವ ಕದಂ ಇತರರು ಪ್ರತಿಭಟನೆ ನಡೆಸಿದರು.