SHARE

ಬೆಳಗಾವಿ: ಕೆಪಿಸಿಸಿ ಹಲವು ಜಿಲ್ಲಾಧ್ಯಕ್ಷರ ಸ್ಥಾನ ಬದಲಾಯಿಸಿದ್ದು ಚಿಕ್ಕೋಡಿ ಪಾರ್ಲಿಮೆಂಟರಿ ನೂತನ ಜಿಲ್ಲಾಧ್ಯಕ್ಷರನ್ನಾಗಿ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಆದೇಶ ಹೊರಡಿಸಿದ್ದಾರೆ. ಚಿಕ್ಕೋಡಿ ಪಾರ್ಲಿಮೆಂಟ್ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ವಿಜಯಕುಮಾರ ಮುಕುಂದ ಮತ್ತು ಲಕ್ಷ್ಮಣರಾವ್ ಚಿಂಗಳೆ ಹೆಸರು ಮುಂಚೂಣಿಯಲ್ಲಿದ್ದವು. ಈ ಪೈಕಿ ಲಕ್ಷ್ಮಣರಾವ್ ಗೆ ಅಧ್ಯಕ್ಷ ಹುದ್ದೆ ಒಲಿದು ಬಂದಿದೆ.

ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ವಿನಯ ನಾವಲಗಟ್ಟಿ ಅವರನ್ನು ಮುಂದುವರೆಸಲಾಗಿದೆ. ಕಾಂಗ್ರೆಸ್ ನಗರ ಅಧ್ಯಕ್ಷ ಸ್ಥಾನದಲ್ಲಿದ್ದ ರಾಜು ಸೇಠ್ ಅವರ ಹುದ್ದೆಯನ್ನು ಹಿಂಪಡೆಯಲಾಗಿದೆ ಎಂಬ ವಿಷಯ ಚರ್ಚೆಯಲ್ಲಿದ್ದು, ಸ್ಪಷ್ಠಗೊಂಡಿಲ್ಲ.

ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನೇ ರದ್ದುಗೊಳಿಸುವ ಆಯ್ಕೆ ಪಕ್ಷದ ಮುಂದಿರುವ ಮಧ್ಯೆ ರಾಜು ಸೇಠ್ ಸ್ಥಾನ ತೆರವುಗೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಬೆಳಗಾವಿ ಮತ್ತು ಚಿಕ್ಕೋಡಿ ಪಾರ್ಲಿಮೆಂಟರಿ ಅಧ್ಯಕ್ಷ ಸ್ಥಾನಗಳನ್ನು ಇಟ್ಡುಕೊಂಡು, ಬೆಳಗಾವಿ ನಗರ ಅಧ್ಯಕ್ಷ ಸ್ಥಾನ ರದ್ದು ಮಾಡಲಾಗಿದೆ ಎನ್ನಲಾಗಿದೆ.

ಡಾ. ಪರಮೇಶ್ವರ ಅಭಯ: ಚಿಕ್ಕೋಡಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಮಂಜುಳಾ ಮುಕುಂದ ಆಯ್ಕೆ ಪಟ್ಟಿಯಲ್ಲಿ ಕೊನೆಗೆ ರದ್ದಾಗಿದ್ದರೂ, ಅವರಿಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ನೀಡುವ ಆಯ್ಕೆ ನಮ್ಮ ಮುಂದಿದೆ ಎಂದು ಪರಮೇಶ್ವರ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದರು.