SHARE

ಬೆಳಗಾವಿ: ವಿಧಾನ ಸಭೆ ಚುನಾವಣೆಗಳು ಸಮೀಪಿಸಿರುವ ಸಮಯದಲ್ಲಿ ರಾಜ್ಯ ಸರಕಾರ ಎಮ್ ಇ ಎಸ್ ಪ್ರತಿನಿಧಿಸುವ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ SFC ನಿಧಿಯಿಂದ ಹತ್ತು ಕೋಟಿ ಬಿಡುಗಡೆ ಮಾಡಿದ್ದಕ್ಕೆ ಕನ್ನಡ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿದ್ದಾರೆ.

ಇಂದು ಬೆಳಿಗ್ಗೆ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ್ದ ಸಭೆಯಲ್ಲಿ ಮುಖಂಡರು ಈ ಆಕ್ಷೇಪ ವ್ಯಕ್ತಪಡಿಸಿ, ಈ ನಿಧಿ ಬಳಕೆಯ ಮೊದಲು ತಯಾರಿಸಲಾಗುವ ಕ್ರಿಯಾ ಯೋಜನೆಯಲ್ಲಿ(Action Plan) ಕನ್ನಡ ಪ್ರದೇಶಗಳ ಅಭಿವೃದ್ಧಿ ಕೆಲಸಗಳೂ ಸಹ ಸೇರುವಂತೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರಪಾಲಿಕೆಯ ಆಯುಕ್ತರು ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಕೇವಲ ಮರಾಠಿಯಲ್ಲಿ ಪ್ರಚಾರ ಮಾಡುತ್ತಿರುವದನ್ನು ಸಭೆಯು ಆಕ್ಷೇಪಿಸಿತು.

ಗಡಿ ಸಂರಕ್ಷಣಾ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಭೆಯು, ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿತು. ಸುವರ್ಣ ಸೌಧದ ಬಗ್ಗೆ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದ್ದನ್ನು ಸಭೆಯು ಖಂಡಿಸಿತಲ್ಲದೆ, ತಿಂಗಳಲ್ಲಿ ಎಲ್ಲ ಸಚಿವರು ಕನಿಷ್ಟ ಮೂರು ದಿನ ಸುವರ್ಣ ಸೌಧದಲ್ಲಿದ್ದು ಉತ್ತರ ಕರ್ನಾಟಕದ ಕೆಲಸಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿತು. ಬೆಳಗಾವಿ ಮರುನಾಮಕರಣಗೊಂಡು ಎರಡು ವರ್ಷಗಳಾದರೂ ಕೆಲ ಇಲಾಖೆಗಳಲ್ಲಿ ಇದರ ಅನುಷ್ಠಾನವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಕೊಳ್ಳಲು ಸಭೆಯಲ್ಲಿ ಒತ್ತಾಯಿಸಲಾಯಿತು. ಬೆಳಗಾವಿ ನಗರದಲ್ಲಿ ಹಾಕಲಾಗಿರುವ ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಮರಾಠಿಗೆ ಮೊದಲ ಆದ್ಯತೆ ನೀಡಿದ ಫಲಕಗಳ ವಿರುದ್ಧ ಪಾಲಿಕೆ ಕ್ರಮಕೈಕೊಳ್ಳಬೇಕು ಎಂದು ಸಭೆ ಒತ್ತಾಯಿಸಿತು. ಜಿಲ್ಲಾಧಿಕಾರಿಗಳ ಜತೆಗೆ ಕನ್ನಡದ ಸಮಸ್ಯೆಗಳ ಬಗ್ಗೆ ಶೀಘ್ರವೇ ಚರ್ಚಿಸಲು ಸಭೆ ತೀರ್ಮಾನಿಸಿತು.

ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಪಿ.ಬಿ.ಸ್ವಾಮಿ, ಶಂಕರ ಬಾಗೇವಾಡಿ, ಕಸ್ತೂರಿ ಭಾವಿ, ಮಹಾಂತೇಶ ಇಂಚಲ, ಡಾ.ವೀರಣ್ಣ ಮುಂತಾದವರು ಭಾಗವಹಿಸಿದ್ದರು.