SHARE

ಬೆಳಗಾವಿ: ಬಾಂಬೆ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಎರಡೂ ಡಿವಿಶನ್ ಜಿಲ್ಲೆಗಳ ಏಳ್ಗೆಗೆ ಚರ್ಚೆ ಸೀಮಿತ ಎಂದು ಭಾವಿಸಿದ್ದ ನಮಗೆಲ್ಲ ಬೆಳಗಾವಿಯ ಚಳಿಗಾಲದ ಅಧಿವೇಶನ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಹೋರಾಟಗಾರ ವಾಟಾಳ ನಾಗರಾಜ ಆಕ್ರೋಶ ವ್ಯಕ್ತಪಡಿಸಿ ಸುವರ್ಣಸೌಧದ ಎದುರು ಇಂದು ಪ್ರತಿಭಟನೆ ನಡೆಸಿ, ಬಂಧನಕ್ಕೊಳಗಾದರು. ಈ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವಲ್ಲಿ ಸರಕಾರ ಮತ್ತು ರಾಜಕೀಯ ಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದು ಹರಿಹಾಯ್ದರು.

ದ್ವಿಸದನಗಳ ಕಲಾಪಗಳು ನಡೆದಾದರೂ ಏನು ಉಪಯೋಗ ಎಂದು ವಾಟಾಳ ಪ್ರಶ್ನಿಸಿದ್ದಾರೆ. ಎರಡೂ ಸದನಗಳ ಶಾಸಕರಿಗೆ ಜವಾಬ್ದಾರಿ ಇಲ್ಲ. ವಿರೋಧ ಪಕ್ಷ ಅಸಹಾಯಕವಾಗಿದೆ. ಕಳಸಾ ಬಂಡೂರಿ, ಮಹಾದಾಯಿ ಇತ್ಯರ್ಥದ ಬಗ್ಗೆ ನಿರ್ಧಾರ ಪ್ರಕಟವಾಗಲಿಲ್ಲ. ಸರಕಾರ ತನ್ನ ಸಾಧನೆಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ವಾಟಾಳ್ ಒತ್ತಾಯಿಸಿದರು. ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ನಾಡದ್ರೋಹಿಗಳಾಗಿದ್ದರೂ ಸದನದಲ್ಲಿ ಕೂಡುತ್ತಾರೆಂದರೆ ಎಂಥ ವಿಪರ್ಯಾಸ ಎಂದರು.