SHARE

ಬೆಳಗಾವಿ: ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಬಾಲಕಿಯ ಪ್ರಕರಣಕ್ಕೆ ನಗರದಲ್ಲಿ ಭಾರಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ, ಎಬಿವಿಪಿ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಯುವ ಮಂಚ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರತ್ಯೇಕ ಮನವಿ ಸಲ್ಲಿಸಿದವು.ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಾಂತಿಗೆ ಹೆಸರಾದ ಕರ್ನಾಟಕದಲ್ಲಿ ಕೊಲೆ, ಅತ್ಯಾಚಾರ, ಮಾನಹಾನಿ, ರೈತ ಆತ್ಮಹತ್ಯೆ ಪ್ರಕರಣಗಳು, ಜಿಹಾದಿ ಶಕ್ತಿಗಳ ಅಟ್ಟಹಾಸ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಗ್ಗಿಲ್ಲದೇ ನಡೆದಿವೆ ಆದರೆ ಸಮಾಜ ವಿರೋಧಿಗಳು ಮತ್ತು ದುಷ್ಕರ್ಮಿಗಳ ಸೆದೆ ಬಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹೋಲಿಕೆಯಾಗಿ ಅಪ್ರಾಪ್ತ ಶಾಲಾ ಬಾಲಕಿಯನ್ನು ಕಾಮುಕರು ಅತ್ಯಾಚಾರ ಗೈದು ಹತ್ಯೆ ಮಾಡಿರುವುದು ಶೋಚನೀಯ ಎಂದು ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಇದಲ್ಲದೇ ಬಿಜೆಪಿಯ ದಿ. ಯೋಗೀಶಗೌಡರ ಪತ್ನಿಗೆ ಇಲ್ಲ ಸಲ್ಲದ ಆಮೀಷ ಒಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ವ್ಯವಸ್ಥಿತ ಹುನ್ನಾರ ಮಾಡಿದೆ ಎಂದರು.
ರಾಜೇಂದ್ರ ಹರಕುಣಿ, ಶಿವಲಿಂಗ ಹೂಗಾರ, ಡಾ. ರವಿ ಪಾಟೀಲ, ಉಜ್ವಲಾ ಬಡವನಾಚೆ, ರಾಜು ಚಿಕ್ಕನಗೌಡರ, ಸದಾನಂದ ಗುಂಟೆಪ್ಪನವರ ಇತರರು ಭಾಗವಹಿಸಿದ್ದರು.