SHARE

ಬೆಳಗಾವಿ: 21ನೆಯ ಶತಮಾನದ ಸಾಕ್ಷಿಪ್ರಜ್ಞೆಯಾಗಿರುವ ಕುವೆಂಪು ಅವರ ಸಾಹಿತ್ಯವು ಕನ್ನಡ ವೈಚಾರಿಕ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಡಾಂಟೆ, ವರ್ಜಿನ್, ರಂವೀಂದ್ರನಾಥ ಠಾಕೂರ್ ಮುಂತಾದವರ ಸಾಲಿನಲ್ಲಿರುವ ಕುವೆಂಪು ಅವರು ಮಾನವತೆಯ ಬೆಳಕಾಗಿದ್ದಾರೆ. ಇಂದಿಗೂ ಕೂಡ ಜೀವಂತ ಮಾದರಿಯಾಗಿದ್ದಾರೆ. ಅವರು ನೀಡಿದ ಮನುಜಮತ ವಿಶ್ವಪಥ ಎನ್ನುವ ಘೋಷಣೆಯು ಬರಲಿರುವ ಶತಮಾನಗಳಿಗೆ ಧ್ಯೇಯ ವಾಕ್ಯವಾಗಬೇಕಾಗಿದೆ. ಅವರ ವೈಚಾರಿಕತೆಯು ಕನ್ನಡ ಜಗತ್ತಿಗೆ ಚಿರ ನೂತನ ಸಂದೇಶವಾಗಿದೆಯೆಂದು ಪ್ರೊ. ಎಸ್.ಎಂ. ಗಂಗಾಧರಯ್ಯ ಅವರು ಅಭಿಪ್ರಾಯಪಟ್ಟರು. ಇಂದು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೈವಿಧ್ಯಮಯ ಕುವೆಂಪು ಅವರ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯದ ಗಂಗೋತ್ರಿಯಾಗಿದೆಯೆಂದು ಅಭಿಪ್ರಾಯಪಟ್ಟರು. ವಿಶ್ವಮಾನವತ್ವದ ಸಂದೇಶದ ಅನಿವಾರ್ಯತೆ ಇಂದಿನ ಜಗತ್ತಿಗೆಯೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಪಿ. ಮಿರ್ಜಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಎಂ.ಜಿ. ಹಿರೇಮಠ ಮಾತನಾಡಿ ಕುವೆಂಪು ಅವರ ಸಾಹಿತ್ಯವನ್ನು ಆಸ್ವಾದಿಸುವುದೆ ಧ್ಯೇಯ ಮಂತ್ರದಂತೆ ಕಾಣುತ್ತಿದೆ. ಅವರ ಮನುಜಮತ ವಿಶ್ವಪಥ ಸಿದ್ಧಾಂತವು ಅನುಷ್ಠಾನಗೊಳ್ಳಬೇಕಾಗಿದೆ. ಅವರ ಸಾಹಿತ್ಯವನ್ನು ಹೊಸ ತಲೆಮಾರಿವರು ಅಧ್ಯಯನಿಸಬೇಕೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಹನುಮಂತಪ್ಪ ಸಂಜೀವಣ್ಣನವರ ಕುವೆಂಪು ಸಾಹಿತ್ಯದ ವೈಚಾರಿಕ ಹಿನ್ನೆಲೆಯನ್ನು ಕುರಿತು ವಿವರಿಸಿದರು. ಸಮಾರಂಭದಲ್ಲಿ ಅಧ್ಯಾಪಕರಾದ ಶ್ರೀ. ಯಲ್ಲಪ್ಪ ಜಕ್ಕಣ್ಣವರ ನಿರೂಪಿಸಿದರು. ಅಧ್ಯಾಪಕರಾದ ಶ್ರೀ. ಮಲ್ಲೇಶ ಎಸ್. ದೊಡ್ಡಲಕ್ಕಣ್ಣವರ ಅವರು ಸ್ವಾಗತ ಹಾಗೂ ಪರಿಚಯ ಭಾಷಣವನ್ನು ಮಾಡಿದರು. ಅಧ್ಯಾಪಕರಾದ ಶ್ರೀ. ರುದ್ರಪ್ಪ ಅರಳೀಮಟ್ಟಿ ವಂದಿಸಿದರು. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅಧ್ಯಾಪಕ ವರ್ಗ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ ಅಧ್ಯಾಪಕರುಗಳು ಉಪಸ್ಥಿತರಿದ್ದರು.