SHARE

ಬೆಳಗಾವಿ: ಸುಗಮ ರಸ್ತೆ ಸಂಚಾರಕ್ಕೆ ಅಡೆತಡೆಯಾಗಿದ್ದ ಗೂಡಂಗಡಿಗಳನ್ನು ಪೊಲೀಸ್ ಮತ್ತು ಪಾಲಿಕೆ ಇಂದು ಬೆಳಿಗ್ಗೆ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿ ಅತಿಕ್ರಮಣದಾರರಿಗೆ ಭಯ ಹುಟ್ಟಿಸಿದರು.ಶಹಾಪುರ ನಾಥ ಪೈ ವೃತ್ತದಿಂದ ಶಿವಾಜಿ ಉದ್ಯಾನ- ಕಪಿಲೇಶ್ವರ ದೇವಸ್ಥಾನದವರೆಗಿನ ಎಲ್ಲ ಗೂಡಂಗಡಿಗಳನ್ನು ಶಹಾಪುರ ಪೊಲೀಸ್ ಠಾಣೆಯ ಸುಪರ್ಧಿಯಲ್ಲಿ ತೆರವುಗೊಳಿಸಲಾಯಿತು.ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ, ಇನ್ಸಪೆಕ್ಟರ್ ಜಾವೇದ ಮುಶಾಪುರಿ, ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಇಂದು ರಸ್ತೆ ಬದಿಯ ಎಲ್ಲ ಗೂಡಂಗಡಿಗಳು ಹಾಗೂ ಅತಿಕ್ರಮಿತ ಭಾಗಗಳನ್ನು ತೆರವುಗೊಳಿಸಿದರು. ಪಾಲಿಕೆ ಅತಿಕ್ರಮಣ ತೆರವು ವಾಹನಗಳು ಗೂಡಂಗಡಿಗಳನ್ನು ಎಳೆದೊಯ್ದು ನಾಶಗೊಳಿಸಿದರು.ಒನ್ ಸೈಡ್ ಪಾರ್ಕಿಂಗ್: ಇದೇ ಮೊದಲ ಬಾರಿಗೆ ಶಹಾಪುರ ಖಡೇಬಜಾರ್ ರಸ್ತೆಯುದ್ದಕ್ಕೂ ನಾಥ ಪೈ ವೃತ್ತದಿಂದ ಬ್ಯಾಂಕ್ ಆಫ್ ಇಂಡಿಯಾದವರೆಗೆ ಒನ್ ಸೈಡ್ ಪಾರ್ಕಿಂಗ್ ವ್ಯವಸ್ಥೆ ಬೆಳಂಬೆಳಿಗ್ಗೆ ಮಾಡಲಾಯಿತು. ಎಸಿಪಿ ಶಂಕರ ಮಾರಿಹಾಳ ಹಾಗೂ ಜಾವೇದ ಮುಶಾಪುರಿ ಹಾಗೂ ಠಾಣೆ ಸಿಬ್ಬಂಧಿ ಕಾರ್ಯಾಚರಣೆಗಿಳಿದರು.ಥಾಣೆ ಗಲ್ಲಿ ಶಹಾಪುರ ಕ್ಲೀನ್: ಥಾಣೆ ಗಲ್ಲಿ ಶಹಾಪುರದಲ್ಲಿ ರಸ್ತೆಯನ್ನು ಆವರಿಸಿದ್ದ ತರಕಾರಿ ಮಾರಾಟಗಾರರನ್ನು ತೆರವುಗೊಳಿಸಿ ಪಾಲಿಕೆ ಖುಲ್ಲಾ ಜಾಗೆಯಲ್ಲಿ ಕೂಡ್ರಲು ಅನುವು ಮಾಡಲಾಯಿತು. ಹಲವು ವರ್ಷಗಳಿಂದ ಅಕ್ರಮವಾಗಿ ಜಾಗ ಹಿಡಿದಿದ್ದ ತರಕಾರಿ ಅಂಗಡಿಯೊಂದನ್ನು ಪಾಲಿಕೆ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಸಿಬ್ಬಂಧಿ ತೆರವುಗೊಳಿಸಿ ಜಾಗ ಸ್ವಾಧೀನ ಮಾಡಿಕೊಂಡರು.