SHARE

ಕಾಶೀಮ ಹಟ್ಟಿಹೊಳಿ,ಖಾನಾಪುರ

ಖಾನಾಪೂರ: ತಾಲೂಕಿನ ಝಾಡ ನಾವಗಾ ಗ್ರಾಮದ ನಿವಾಸಿ ಮಾಜಿ ಶಾಸಕ ಬಿಜೆಪಿ ಹಿರಿಯ ಮುಖಂಡರಾದ ಪ್ರಹ್ಲಾದ ಕಲ್ಲಪ್ಪ ರೇಮಾಣಿ(67)ಸೋಮವಾರ ಮುಂಜಾನೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳಿನಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಂದಾಗಿ ಬೆಂಗಳೂರು ಮತ್ತು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಕೆವಲ ಎರಡು ದಿನಗಳ ಹಿಂದಷ್ಟೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅವರು ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಲ್ಹಾದ ಕಲ್ಲಪ್ಪ ರೇಮಾಣಿ ಇವರು ಸಪ್ಟೆಂಬರ 12, 1951ರಲ್ಲಿ ರೈತಾಪಿ ಕುಟುಂಬದಲ್ಲಿ ಜನಿಸಿದರು. ಪಿಯುಸಿವರೆಗೆ ಶಿಕ್ಷಣ ಪಡೆದ ಇವರು 1992ರಲ್ಲಿ ಚಾಪಗಾಂವ ಮಂಡಲ ಪಂಚಾಯತ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. ಎಮ್.ಇ.ಎಸ್ ಪಕ್ಷಕ್ಕೆ ಸೇರ್ಪಡೆಯಾಗಿ 1993ರಲ್ಲಿ ಕೌಂದಲ ತಾಪಂ ಸದಸ್ಯರಾದರು. 1998ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ದಿಸಿ ಸೋತರು. 2002ರಲ್ಲಿ ಖಾನಾಪುರ ತಾಲೂಕಾ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದರು. 2004ರಲ್ಲಿ ನಡೆದ ವಿಧಾನಸಭೆ ಚುನಾಚಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮತ್ತೆ ಸೋಲುಂಡರು. ಆತ್ಮವಿಶ್ವಾಸ ಕಳೆದುಕೊಳ್ಳದೆ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕ್ರಮಗಳನ್ನು ಮಾಡುವುದರ ಜೋತೆಗೆ ಬಿಜೆಪಿ ಪಕ್ಷವನ್ನು ಬಲಪಡಿಸಿದರು. ಮತ್ತೆ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ ಇವರು ರಾಷ್ಟ್ರೀಯ ಪಕ್ಷದ ಮೊಟ್ಟಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. ಇದರ ಜೋತೆಗೆ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಮ್.ಇ.ಎಸ್ ವಿರುದ್ಧ ಸೋಲನ್ನು ಅನುಭವಿಸಿದರು.

ಖಾನಾಪುರ ತಾಲೂಕು ಜನಪ್ರಿಯ ಮಾಜಿ ಬಿಜೆಪಿ ಶಾಸಕ ಪ್ರಲ್ಹಾದ ರೇಮಾಣಿ 2008ರಿಂದ 2013ರವರೆಗೆ ಗಡಿಭಾಗದ ಹಿಂದುಳಿದ ತಾಲೂಕಿನ ರಾಷ್ಡ್ರೀಯ ಪಕ್ಷದ ಶಾಸಕರಾಗಿ ಅನೇಕ ಜನಪರ ಮತ್ತು ಸಾಮಾಜಿಕ ಕಾರ್ಯಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಸ್ವಾತಂತ್ರ್ಯಾನಂತರದಿಂದ ಎಮ್.ಇ.ಎಸ್ ಪಕ್ಷದ ಶಾಸಕರಿಗೆ ಮಣೆ ಹಾಕಿದ್ದ ತಾಲೂಕಿನ ಜನ ಬಿಜೆಪಿ ಪಕ್ಷದ ಶಾಸಕರನ್ನು ಆರಿಸಿ ಕಳುಹಿಸುವುದರ ಮೂಲಕ ನಿರ್ಲಕ್ಷಿತ ಜನರ ಅಭಿವೃದ್ಧಿ ಕಾರ್ಯಗಳಿಗೆ ಕಾರಣರಾದರು. ಶಾಸಕ ರೇಮಾಣಿಯವರಿಂದ ಕಾಡಂಚಿನ ಪಶ್ಚಿಮಭಾಗದ ಗ್ರಾಮಗಳ ಜೋತೆಗೆ ನೀರ್ಲಕ್ಷಿತ ಪೂರ್ವಭಾಗದ ಗ್ರಾಮಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುವಲ್ಲಿ ಸಫಲವಾದವು. ರಸ್ತೆ ಕಾಮಗಾರಿ, ಕೆರೆಗಳ ಅಭಿವೃದ್ಧಿ, ಮಂದಿರ ಮತ್ತು ಮಸಿಧಿಗಳ ಜಿರ್ಣೋದ್ಧಾರ, ಮುಂತಾದ ಜನಪಯೋಗಿ ಕಾರ್ಯಗಳ ಮೂಲಕ ಸೇವೆಸಲ್ಲಿಸಿದ್ದರು. ಪ್ರತಿವರ್ಷ ತಮ್ಮ ಕಾರ್ಯಕರ್ತರನ್ನು ಪ್ರಸಿದ್ಧ ಪ್ರಕ್ಷಣಿಯ ಪವಿತ್ರ ಸ್ಥಳಗಳ ಪ್ರವಾಸಗಳಿಗೆ ಕರೆದುಕೊಂಡು ಹೋಗುವ ಹವ್ಯಾಸ ಇಟ್ಟುಕೊಂಡಿದ್ದರು. ಉತ್ತರಭಾರತದ ಹಿಮಾಲಯ ತಪ್ಪಲಿನ ಗಂಗೋತ್ರಿ, ಯಮುನೋತ್ರಿ, ಹೃಷಿಕೇಶ, ಜಮ್ಮುವಿನ ವೈಷ್ಣೋಮಾತಾ, ಬದರೀನಾಥ, ಕೇದಾರನಾಥ ದೇವಾಸ್ಥನಗಳ ಪ್ರವಾಸಗಳು ಭಕ್ತಿಭಾವದ ಜೋತೆಗೆ ಜನಮನದಲ್ಲಿ ಅಚ್ಚಳಿಯದೆ ಉಳಿದಿವೆ.

ಮೃಧು ಸ್ವಭಾವದ ವ್ಯಕ್ತಿಯಾದ ಇವರು ಬಡಜನರ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂಧಿಸುತ್ತಿದ್ದರು. ಜನರ ಕೆಲಸ ಆಗುವವರೆಗೆ ವಿಧಾನಸೌಧದಲ್ಲಿ ಧರಣಿ ಕುಳಿತು ಜನಪರ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಂಡು ಬಂದು ಕಾರ್ಯಪ್ರವೃತ್ತರಾಗುತ್ತಿದ್ದರು. ಆದರೆ ಈಗ ತಾಲೂಕಿನ ಜನತೆ ಒಬ್ಬ ಪ್ರಭಾವಿ ಬಿಜೆಪಿ ನಾಯಕನ್ನು ಕಳೆದುಕೊಂಡು ಅನಾಥವಾಗಿದೆ.