ಲಕ್ನೋ: ಎಚ್ ಐವಿ ಫೀಡಿತ ವ್ಯಕ್ತಿಗೆ ಬಳಸಿದ್ದ ಸಿರೀಂಜನ್ನೇ ಇತರರಿಗೂ ಬಳಸಿದ ಪರಿಣಾಮ 21 ಜನರಿಗೆ ಎಚ್ಐವಿ ಸೋಂಕು ಹರಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದೆ. ಈ ಭಯಾನಕ ಅಂಶ ಸರ್ಕಾರ ನಡೆಸಿದ ಆರೋಗ್ಯ ತಪಾಸಣಾ ಶಿಬಿರದ ವೇಳೆ ಬೆಳಕಿಗೆ ಬಂದಿದೆ.
ಉನ್ನಾವೋ ಪ್ರದೇಶದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವದನ್ನು ಕಂಡ ಸಮಿತಿಯೊಂದು ಎಚ್ಐವಿ ಪರೀಕ್ಷಾ ಶಿಬಿರ ನಡೆಸಿ 566 ಜನರನ್ನು ಪರೀಕ್ಷೆಗೊಳಪಡಿಸಿದೆ. ಈ ವೇಳೆ 21 ಮಂದಿ ಎಚ್ ಐವಿ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ.
ರಾಜೇಂದ್ರ ಕುಮಾರ್ ಎಂಬಾತನ ಎಡವಟ್ಟಿನಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ತಿಳಿದು ಬಂದಿದ್ದು, ಈತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿ, ಚುಚ್ಚುಮದ್ದು ನೀಡುವ ವೇಳೆ ಹಲವರಿಗೆ ಒಂದೇ ಸಿರೀಂಜ್ ಬಳಕೆ ಮಾಡಿದ್ದ ಎಂದು ಗೊತ್ತಾಗಿದೆ.
ರಾಜೇಂದ್ರ ಕುಮಾರ್ ಮೇಲೆ ಈಗಾಗಲೇ ದೂರು ದಾಖಲಿಸಲಾಗಿದ್ದು, ಎಚ್ ಐವಿ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಆಸ್ಪತ್ರೆಗೆ ರವಾನಿಸಲಾಗಿದೆ.