SHARE

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ಕಾವೇರಿ ವಿವಾದದ ತೀರ್ಪು ಇಂದು ಪ್ರಕಟವಾಗಿದೆ. ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರು ಬಳಕೆಗೆ ಅವಕಾಶ ನೀಡಿದೆ.

ಇಂದು ತೀರ್ಪು ಪ್ರಕಟಿಸಿದ ಸಿಜೆಐ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ. ಕರ್ನಾಟಕಕ್ಕೆ 28ವರ್ಷಗಳ ನಂತರ ಸ್ವಲ್ಪ ಪ್ರಮಾಣದ ನ್ಯಾಯ ಸಿಕ್ಕಿದ್ದು, ನೀರು ಹಂಚಿಕೆಯಲ್ಲಿ ಸಮಾನ ತತ್ವ ಪಾಲಿಸಬೇಕು ಎಂದು ಸೂಚಿಸಿದೆ.

ಕಾವೇರಿ ನಿರ್ವಹಣ ಮಂಡಳಿ ಕೇಂದ್ರ ಕೆಲಸ ಎಂದು ಹೇಳಿರುವ ಸುಪ್ರೀಂ ಕೋರ್ಟ್, ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ. ಸಂವಿಧಾನದ ಅಡಿಯಲ್ಲಿ ಚೌಕಾಸಿ ಮಾಡುವ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಹೇಳಿದೆ.

ತಮಿಳುನಾಡಿಗೆ 177ಟಿಎಂಸಿ ನೀರು ಹಂಚಿಕೆ ಮಾಡಿದ್ದು, ತಮಿಳುನಾಡಿನ 20ಟಿಎಂಸಿ ನೀರನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, 14.5 ಟಿಎಂಸಿ ನೀರಿನ ಪ್ರಮಾಣವನ್ನು ಕಡಿತ ಗೊಳಿಸಿದೆ. ಕರ್ನಾಟಕ ರಾಜ್ಯದ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರು ಸಿಕ್ಕಿದೆ. ಈ ತೀರ್ಪು ಮುಂದಿನ 15 ವರ್ಷಗಳ ವರೆಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.