SHARE

ಬೆಳಗಾವಿ: ರಾಮದುರ್ಗ ತಾಲೂಕು ಭೇಟಿ ಹಿನ್ನೆಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳಸಾ ಮತ್ತು ಮಹದಾಯಿ ಸಂಬಂಧ ಸ್ಪಷ್ಠ ನಿಲುವು ತಿಳಿಸಬೇಕು ಎಂದು ಒತ್ತಾಯ ವ್ಯಕ್ತವಾಗಿದೆ. ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ರೈತ ಸೇನಾ ಕರ್ನಾಟಕ ರಾಮದುರ್ಗ ಘಟಕದ ಅಧ್ಯಕ್ಷ ಎಚ್. ಎಸ್. ಪಾಟೀಲ, ಎಚ್. ಎಸ್. ಮಡಿವಾಳರ ಮತ್ತು ಶಂಕರ್ ಅಂಬ್ಲಿ ರಾಮದುರ್ಗ ತಾಲೂಕಿಗೆ ರಾಹುಲ್ ಗಾಂಧೀಜಿ ಫೇ. 26ರ ಆಗಮನ ಸ್ವಾಗತಿಸುತ್ತೇವೆ. ಆದರೆ ಅವರು ಇಲ್ಲಿಯವರೆಗೆ ಮಹದಾಯಿ ಮತ್ತು ಕಳಸಾ ಬಂಡೂರಿ ಸಮಸ್ಯೆಗಳ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿರುವುದಿಲ್ಲ. ನಮ್ಮ ತಾಲೂಕಿಗೆ ಭೇಟಿಯ ವೇಳೆಯಲ್ಲಿ ಅವರು ತಮ್ಮ ಪಕ್ಷದ ನಿಲುವನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಹಕಾರಿ ಸಂಘದಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ನಿರ್ದೇಶನ ನೀಡಬೇಕು. ರೈತರು ಬೆಳೆದ ಎಲ್ಲ ಬೆಳೆಗಳಿಗೂ ಸರ್ಕಾರದಿಂದ ಬೆಂಬಲ ಬೆಲೆಯನ್ನು ಘೋಷಿಸಬೇಕು. ನಿರಂತರವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕೂಡಲೇ ರೈತರ ಖಾತೆಗಳಿಗೆ ಹಣವನ್ನು ಸಂದಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ರಾಮದುರ್ಗ ಬೈ ಪಾಸ್ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶಾಂತಿಯುತ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದರು.