SHARE

ಬೆಳಗಾವಿ: ರಾಮದುರ್ಗದ ಮಾಜಿ ಶಾಸಕ, ಹಿರಿಯ ಸ್ವಾತಂತ್ರ್ಯಯೋಧ, ಶತಾಯುಷಿ ಮಹಾದೇವಪ್ಪ ಪಟ್ಟಣ ಇಂದು ಕೊನೆಯುಸಿರೆಳೆದರು. ಇಂದು ಶುಕ್ರವಾರ ಬೆಳಿಗ್ಗೆ 7ಕ್ಕೆ ತಮ್ಮ107 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರು ತಮ್ಮ ಹಿಂದೆ ಪತ್ನಿ ಹಾಗೂ ಮಾಜಿ ಶಾಸಕಿ ಶಾರದಮ್ಮ ಪಟ್ಟಣ, ಪುತ್ರ ಹಾಗೂ ಹಾಲಿ ಶಾಸಕ ಅಶೋಕ ಪಟ್ಟಣ ಸಹಿತ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

1939 ರ ಎಪ್ರಿಲ್‌ ತಿಂಗಳಲ್ಲಿ ರಾಮದುರ್ಗ ಮಹಾರಾಜ ಭಾವೆ ವಿರುದ್ಧ ನಡೆದ ಕರ ನಿರಾಕರಣೆ ಚಳವಳಿಯ ನಾಯಕತ್ವ ವಹಿಸಿದ್ದ ಪಟ್ಟಣ ಅವರ ವಿರುದ್ಧ ಬ್ರಿಟಿಷ ಆಡಳಿತ ಕಂಡಲ್ಲಿ ಗುಂಡಿಕ್ಕುವ ವಾರಂಟ್ ಹೊರಡಿಸಿತ್ತು. ಭೂಗತರಾಗಿದ್ದ ಪಟ್ಟಣ ಅವರು ಸುಮಾರು ಎಂಟು ವರ್ಷಗಳ ನಂತರ ರಾಮದುರ್ಗಕ್ಕೆ ಹಿಂತಿರುಗಿದರು.1957 ರಲ್ಲಿ ಕಾಂಗ್ರೆಸ್ ವಿರುದ್ಧ ಲೋಕಸೇವಾ ಸಂಘದ ಪರವಾಗಿ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾದರು. ನಂತರ ಅವರ ಪತ್ನಿ ಶಾರದಮ್ಮ ಸಹ ಶಾಸಕಿಯಾಗಿ ಸದ್ಯ ಅವರಿಬ್ಬರ ಪುತ್ರ ಅಶೋಕ ಪಟ್ಟಣ ಸಹ ಶಾಸಕರಾಗಿದ್ದಾರೆ.