SHARE

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮೇ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಆದ್ದರಿಂದ ಇಂದಿನಿಂದಲೇ ನೀತಿ ಸಂಹಿತಿ ಜಾರಿಯಾಗಲಿದೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್, 2018ರ ರಾಜ್ಯ ವಿಧಾನಸಭೆ ಚುನಾವಣೆಯ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.

ಮೇ 12 ರಂದು ರಾಜ್ಯಾದ್ಯಂತ ಒಂದೆ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 15ರಂದು 224 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 56,659 ಮತಗಟ್ಟೆಗಳಲ್ಲಿ ಮತದಾನದ ನಡೆಯಲಿದ್ದು, ಇವಿಎಂಗಳಿಗೆ ವಿವಿ ಪ್ಯಾಟ್​ ಬಳಸಿ ಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಏಪ್ರಿಲ್​ 24 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್​ 25 ಕ್ಕೆ ಚುನಾವಣಾ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮ ಪತ್ರ ವಾಪಸ್​ ಪಡೆಯಲು ಏಪ್ರಿಲ್​ 27 ಕೊನೆ ದಿನವಾಗಿದೆ. ಓರ್ವ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ ₹28 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ದಾಖಲೆಗಳಿಲ್ಲದ ಹಣ ಸಿಕ್ಕರೆ ಸೀಜ್ ಮಾಡಲಾಗುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರಿಗೆ, ದಿವ್ಯಾಂಗರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಭದ್ರತೆಗಾಗಿ ಕೇಂದ್ರ ಭದ್ರತಾ ಪಡೆ ಬಳಸಿಕೊಳ್ಳಲಾಗುವುದು ಎಂದು ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ.