SHARE

ಬೆಳಗಾವಿ: ನಿನ್ನೆ ನಗರದ ಹೃದಯಭಾಗದಲ್ಲಿ ನಡೆದ ಆರೋಪಿತನೆನ್ನಲಾದ ವ್ಯಕ್ತಿಯೊಬ್ಬನ ಅರೆನಗ್ನ ಹಲ್ಲೆ ಮತ್ತು ಮೆರವಣಿಗೆ ಸಂಬಂಧ ಇಂದು ಪಕ್ಷಾತೀತ ಪ್ರತಿಭಟನೆ ನಡೆಸಿದ ನಾಯಕರು ಮತ್ತು ನಾಗರಿಕರು Law & Order ಬಿದ್ದುಹೋಗಿದೆ ಎಂದು ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಮಿಷ್ನರ್ ಚೆಂಬರ್ ನಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಮುಸ್ಲಿಂ ಸಂಘಟನೆಯ ಜನತೆ ನಿನ್ನೆ ನಡೆದ ಅಮಾನವೀಯ ಹಲ್ಲೆ ಪ್ರಕರಣವನ್ನು ಖಂಡಿಸಿ ಆಯುಕ್ತ ಡಾ. ರಾಜಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಸ್ಪತ್ರೆಯಿಂದ-ಚನ್ನಮ್ಮ ವೃತ್ತ-ಜಿಲ್ಲಾಧಿಕಾರಿ ಕಚೇರಿ-ಆರ್ ಸಿ ಕಚೇರಿ ಹೀಗೆ ಸುಮಾರು ಒಂದು ಕಿಮೀ. ವರೆಗೆ ಬರೀ ಒಂದೇ ವಸ್ತ್ರದ ಮೇಲೆ ಆರೋಪಿತ ವ್ಯಕ್ತಿಯನ್ನು ಜನ ಕೊರಳಿಗೆ ಚಪ್ಪಲಿ ಹಾರ ಹಾಕಿ ಬಡಿಯುತ್ತ ಮೆರವಣಿಗೆ ಮಾಡಿದ್ದು ಇದೇನಿದು ಅರಾಜಕತೆ ಎಂದು ಕಮಿಷ್ನರ್ ರಾಜಪ್ಪ ಅವರನ್ನು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ, ಬಾಬುಲಾಲ ಬಾಗವಾನ, ಧರ್ಮ ಮುಖಂಡ ಸಿಕೆಎಸ್ ನಜೀರ್, ಹಸಿಂ ಭಾವಿಕಟ್ಟಿ, ಅಮೀರ್ ತಾಳಿಕೋಟಿ ಮತ್ತಿತರರು ತರಾಟೆಗೆ ತೆಗೆದುಕೊಂಡಾಗ ಕಮಿಷ್ನರ್ ರಾಜಪ್ಪ ತೆಪ್ಪಗಾದರು.ಸುಮಾರು ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 8:30 ರಿಂದ 9:15 ರವರೆಗೆ ಅನಾಗರಿಕ ಮಾದರಿಯಲ್ಲಿ ಜನ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮತ್ತು ಆತನ ಮೆರವಣಿಗೆ ಸುಮಾರು ಒಂದು ತಾಸು ಆದರೂ ಯಾವುದೇ ಸರಕಾರಿ ವ್ಯವಸ್ಥೆ ಆತನ ಸಹಾಯಕ್ಕೆ ಬರದಿದ್ದರೆ ಹೇಗೆ? ನಿಮ್ಮ ಪೊಲೀಸ್ ಇಲಾಖೆ ಸತ್ತು ಹೋಗಿದೆಯಾ, ಪೊಲೀಸ್ ಆಯುಕ್ತರು ನೀವ್ಯಾಕಿದ್ದೀರಿ, ಶಾಸಕನೊಬ್ಬನ ಆಟಾಟೋಪಕ್ಕೆ ತಕ್ಕಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಸಂಶಯ ಇಲ್ಲ ಎಂದು ಶಂಕರ ಮುನವಳ್ಳಿ ಆಕ್ರೋಶ ವಾಗುತ್ತಿದ್ದಂತೆ ಕಮಿಷ್ನರ್ ಹಲ್ಲೆಕೋರರ ಮೇಲೆ ಸೂಕ್ತ ಕಲಂ ಹಾಕಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾಯಕರಿಗೆ ತಿಳಿಸಿದರು. ಹಲ್ಲೆಕೋರರಿಗೆ ತಕ್ಕ ಶಿಕ್ಷೆ ಆಗುವಂತೆ ಕಲಂ ಗಳನ್ನು ಹಾಕಿ ತತಕ್ಷಣ ಕ್ರಮ ಕೈಗೊಳ್ಳುವಂತೆ ಕಮಿಷ್ನರ್ ಡಾ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ ಅವರಿಗೆ ಸ್ಥಳದಲ್ಲೇ ಆದೇಶ ನೀಡಿದರು.

ರಫೀಕ್ ದೇಸಾಯಿ ಎಂಬ ಆರೋಪಿತನನ್ನು ಕಾನೂನು ಕೈಗೆ ತೆಗೆದುಕೊಂಡು ಜನ ಮಾರಣಾಂತಿಕ ಹಲ್ಲೆ ಅಷ್ಟು ಓಪನ್ ಆಗಿ ಮಾಡುತ್ತಾರೆ ಎಂದರೆ ಯಾರ ಮೇಲಾದರೂ ಸರಳವಾಗಿ ಹಲ್ಲೆ ಆಗಬಹುದು ಎಂದು ನಾಯಕರು ಆತಂಕ ವ್ಯಕ್ತಪಡಿಸಿದರು. ಕಮಿಷ್ನರ್ ಚೇಂಬರ್ ಗೆ ಧಾವಿಸಿ ಬಂದ ಕ್ರೈಂ ಡಿಸಿಪಿ ಮಹಾನಿಂಗ ನಂದಗಾವಿ ಎಲ್ಲರನ್ನೂ ಸಮಾಧಾನಪಡಿಸಿದರು.