SHARE

ಬೆಳಗಾವಿ: ಸುಪ್ರೀಂಕೋರ್ಟ್ ಇತ್ತೀಚೆಗೆ ಅಟ್ರಾಸಿಟಿ ಕೇಸ್ ಗಳ ಬಗ್ಗೆ ಕಾನೂನು ಸಡಿಲಗೊಡಿಸಿರುವುದನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಇಂದು ಡಾ. ಅಂಬೇಡ್ಕರ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದವು. ಇಂದು ಇಡೀ ದೇಶಾದ್ಯಂತ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ನಡೆದಿರುವ ‘ಭಾರತ ಬಂದ್’ ಬೆಂಬಲಿಸಿ ದಲಿತ ನಾಯಕರು ಸಭೆ ನಡೆಸಿ ಚರ್ಚೆ ನಡೆಸಿದರು.

ಅನ್ಯಾಯ- ದೌರ್ಜನ್ಯ ತಡೆಗಟ್ಟುವ ದೌರ್ಜನ್ಯ ತಡೆ ಕಾಯ್ದೆ (SC/ST Prevention of Atrocity Act) ಕಾನೂನನ್ನು ಸರ್ವೋಚ್ಚ ನ್ಯಾಯಾಲಯ ಸಡಿಲಗೊಳಿಸಿರುವುದು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ದಲಿತ ನಾಯಕರು ಆತಂಕ ವ್ಯಕ್ತಪಡಿಸಿದರು.
ದಲಿತರ ಸಂರಕ್ಷಣೆಗೆ ಇದ್ದ ಅಟ್ರಾಸಿಟಿ ಕಾನೂನು ಈಗ ಹಲ್ಲಿಲ್ಲದ ಹಾವಿನ ಸ್ವರೂಪಕ್ಕೆ ಬದಲಾಗಿದೆ. ದಲಿತರ ಮೇಲೆ ದೌರ್ಜನ್ಯ ಎಸಗುವವರು ಕಾನೂನಿನ ಕುಣಿಕೆಯಿಂದ ಹೊರಬರಲು ಈ ತೀರ್ಪು ಸಹಾಯಕವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಡಾ. ಬಿ. ಆರ್. ಅಂಬೇಡ್ಕರ್ ಅವರು ದಲಿತರಿಗೆ ಕೊಟ್ಟಿದ್ದ ದೊಡ್ದ ಅಸ್ತ್ರವನ್ನು ಹಿಂದೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಸಮಾಜವನ್ನು ಇಂದಿನಿಂದ ಜಾಗೃತಗೊಳಿಸಬೇಕಿದೆ ಎಂದು ಅಶೋಕ ಐನವರ ಅಭಿಪ್ರಾಯಪಟ್ಟರು. ಭಾರತ ಬಂದ್ ಹಿನ್ನೆಲೆಯಲ್ಲಿ ಯಾವ ಪ್ರತಿಭಟನೆ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ರೈಲ್ ರೋಖೊ, ರಸ್ತೆ ತಡೆ, ಸರಕಾರಿ ಕಚೇರಿ ಬಂದ್, ಧರಣಿ ಮತ್ತಿತರ ಪ್ರತಿಭಟನೆ ಅಂಶಗಳ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಿತು. ಅಶೋಕ ಐನವರ, ಮಲ್ಲೇಶ ಕುರಂಗಿ, ಗಜಾನನ ದೇವರಮನಿ, ಸದಾಶಿವ ಕೋಲಕಾರ, ಸಿದ್ರಾಯಿ ಮೇತ್ರಿ, ಮೋಹನ ಕಾಂಬಳೆ, ಗಜು ಧರನಾಯಕ, ಸುನೀಲ ಬಸ್ತವಾಡಕರ, ಕಲ್ಲಪ್ಪ ರಾಮಚನ್ನವರ, ಟಿ. ಮೋಹನ, ಲಕ್ಷ್ಮಣ ಛತ್ರೆನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.