SHARE

ಬೆಳಗಾವಿ: ಗೋಕಾಕ ಮತಕ್ಷೇತ್ರದ ನ್ಯಾಯಸಮ್ಮತ ಚುನಾವಣೆ ಆಗಬೇಕು, ಅಕ್ರಮ ತಡೆಗಟ್ಟಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅಕ್ರಮ ಚುನಾವಣೆಗಳಿಗೆ ಹೆಸರಾದ ಗೋಕಾಕ ಕ್ಷೇತ್ರದಲ್ಲಿ ಸ್ವತಃ ಆಡಳಿತ ಯಂತ್ರವೂ ಶಾಮೀಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳ ಗಮನಕ್ಕೆ ಬಂದರೂ ಯಾವುದೇ ಕ್ರಮವಾಗಿಲ್ಲ. ಮುಂಬರುವ 2018ರ ಚುನಾವಣೆ ನ್ಯಾಯಸಮ್ಮತವಾಗಿ ಆಗಬೇಕು.

ನಿನ್ನೆ ಬುಧವಾರ ಗೋಕಾಕ ನಗರದಲ್ಲಿ ಸಚಿವ ರಮೇಶ ಜಾರಕಿಹೊಳಿ ಮನೆ ಪ್ರದೇಶದಲ್ಲಿ ಬೃಹತ್ ಶಾಮಿಯಾನ ಹಾಕಿ, ಕಾಂಗ್ರೆಸ್ ಪಕ್ಷದ ಧ್ವಜ ಹಾಕಿ ಸುಮಾರು 300 ರಷ್ಟು ವಾಹನಗಳನ್ನು ತರಲಾಗಿತ್ತು.‌ ಆದರೆ ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಂದು ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಗಮನ ಸೆಳೆಯಲಾಯಿತು. ನೀತಿಸಂಹಿತೆ ಜಾರಿ ಇರುವಾಗ ಊಟೋಪಚಾರದ ವ್ಯವಸ್ಥೆ ಸಹ ನೂರಾರು ಜನರಿಗೆ ಮಾಡಲಾಗಿತ್ತು. ಈ ಬಗ್ಗೆ ಗೋಕಾಕ ತಹಶೀಲ್ದಾರ ಅವರಿಗೆ ಫೋನ್ ಮೂಲಕ ಮತ್ತು ಖುದ್ದಾಗಿ ಭೇಟಿ ಮಾಡಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಡಿಸಿ ಎದುರು ಬಿಜೆಪಿ ಮುಖಂಡರು ಆಗ್ರಹಿಸಿದರು. ಗೋಕಾಕ ತಹಶೀಲ್ದಾರ ಅವರ ಕಾರ್ಯವೈಖರಿ ಸಂಶಯಾಸ್ಪದವಾಗಿದೆ. ರಾಜಕೀಯ ನಾಯಕರ ಮರ್ಜಿಯಂತೆ ಗೋಕಾಕ ತಹಶೀಲ್ದಾರ ಅಧಿಕಾರ ನಡೆಸಿದ್ದಾರೆ ಎಂದರು.

ಅಶೋಕ ಪೂಜಾರಿ, ವಿ. ಬ. ಯಲಿಗಾರ, ವಿರೂಪಾಕ್ಷ ಯಲಿಗಾರ, ಮಂಜು ಕುಲಕರ್ಣಿ, ಎಚ್. ಪಿ. ತಳಕಟ್ನಾಳ, ಡಿ. ಆರ್. ಮುಲ್ಲಾ, ಎಸ್. ಎಂ. ಕುಮಾರ ಮತ್ತಿತರರು ಉಪಸ್ಥಿತರಿದ್ದರು.